ಹೆಸರು ಬದಲಾದೊಡೆ ವ್ಯಕ್ತಿತ್ವ ಬದಲಾದೀತೆ?

 



ಈ ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಗುರುತಿಸಿಕೊಳ್ಳುವುದು ತನ್ನ ಹೆಸರಿನಿಂದ. ಆದರೆ ಇಂದಿಗೂ ಹೆಣ್ಣು ಗುರುತಿಸಿಕೊಳ್ಳುವುದು ಅವಳ ಹೆಸರಿನ ಹಿಂದಿರುವ ತಂದೆ ಅಥವಾ ಗಂಡನ ಹೆಸರಿನಿಂದ. 

ಅವಳು ಮದುವೆಯಾಗುತ್ತಿದ್ದಂತೆ ಹೆಸರೂ ಸಹ ಬದಲಾಗುತ್ತದೆ. ಅವಳ ಪೋಷಕರು ಬದಲಾಗಿದ್ದರ ಸೂಚಕ ಅದು. ಅವಳಿಗೆ ಇಷ್ಟವಿದೆಯೋ ಇಲ್ಲವೋ ಅವಳ ಉಪನಾಮ ತಂದೆಯ ಹೆಸರಿನಿಂದ ಪತಿಯ ಹೆಸರಿಗೆ ಬದಲಾಗುತ್ತದೆ. 

ಕೆಲವರಂತೂ ಅವಳನ್ನು ಹೆಸರಿನಿಂದಲ್ಲದೇ ಇಂತಹವರ ಹೆಂಡತಿ ಅಂತಲೇ ಗುರುತಿಸುತ್ತಾರೆ.‌ ಅವಳ ಜೊತೆ ಮಾತನಾಡುವಾಗ ಜನರು ಅವಳ ಗಂಡನ ಸರ್ನೇಮ್ ಹಿಡಿದೇ ಕರೆಯುತ್ತಾರೆ. ಆಗ ಅವಳ ಹೆಸರೇ ಪೂರ್ತಿಯಾಗಿ ಅಪ್ರಸ್ತುತವಾಗಿ ಬಿಡುತ್ತದೆ.

ಒಮ್ಮೊಮ್ಮೆ ಇದು ಎಷ್ಟು ಕಿರಿಕಿರಿಯಾಗುತ್ತದೆಂದರೆ, ಒಬ್ಬ ಮಹಿಳೆ ತನ್ನ ಸ್ವಂತ ಪರಿಶ್ರಮದಿಂದ ಏನಾದರೂ ಸಾಧಿಸಿ ಹೆಸರು ಮಾಡಿರುವಾಗ, ಮದುವೆಯಾದ ಮಾತ್ರಕ್ಕೆ ಆಕೆಯ ಹೆಸರೇ ಬದಲಾಗಿಬಿಟ್ಟರೆ ಆಕೆಯ ಐಡೆಂಟಿಟಿಯ ಕಥೆ ಏನು? 

ವ್ಯವಹಾರದಲ್ಲಿ ಆಕೆಯ ಗ್ರಾಹಕರು ಆಕೆಯನ್ನು ಒಂದು ಹೆಸರಿನಿಂದ ಗುರುತಿಸುವಾಗ ಆಕೆ ಹೆಸರು ಬದಲಾಯಿಸಿಕೊಂಡರೆ ಆಕೆಯನ್ನು ಅವರೇ ಇವರು ಅಂತ ಗುರುತಿಸುವುದಾದರೂ ಹೇಗೆ? ಕೆಲವರಂತೂ ಮದುವೆಯಾದ ಕೂಡಲೇ ಆಕೆಯ ಹೆಸರನ್ನು ಪೂರ್ತಿಯಾಗಿ ಬದಲಿಸಿ ಬಿಡುತ್ತಾರೆ. ತಾಯಿ ಮನೆಯಲ್ಲಿ ಒಂದು ಹೆಸರಿದ್ದರೆ, ಗಂಡನ ಮನೆಯಲ್ಲಿಯೇ ಮತ್ತೊಂದು ಹೆಸರು ಇರುತ್ತದೆ.

ಒಮ್ಮೆ ಹೀಗಾಯಿತು. ನನ್ನ ಅಜ್ಜಿ ಸತ್ಯಭಾಮಾ ಎನ್ನುವವರಿಗೆ ಫೋನ್ ಮಾಡಿ ಕೊಡು ಅಂತ ಕೇಳಿದರು. ನಾನು ಡಯಲ್ ಮಾಡಿ ಕೊಟ್ಟೆ. ನಮ್ಮಜ್ಜಿ ಮಾತನಾಡುತ್ತಿದ್ದವರು ಮಧ್ಯೆ ಮಧ್ಯೆ ಕಮಲ ಎನ್ನುತ್ತಿದ್ದರು. ನನಗೆ ಗೊಂದಲವಾಯ್ತು. 

ನಾನು ಫೋನ್ ಮಾಡಿಕೊಟ್ಟಿದ್ದು ಸತ್ಯಭಾಮಾರಿಗೋ ಕಮಲರಿಗೋ? ಅದ್ಸರಿ ಇದ್ಯಾರು ಕಮಲ? ನಮ್ ನೆಂಟ್ರಲ್ಲಿ ಯಾರೂ ಇಲ್ವಲ್ಲ ಅಂತ ತಲೆ ಕೆಟ್ಟೋಯ್ತು. ಫೋನ್ ಇಟ್ಟ ಮೇಲೆ ಕೇಳಿದ್ರೆ ಸತ್ಯಭಾಮಾ ಅನ್ನುವುದು ಗಂಡನ ಮನೆಯ ಹೆಸರಂತೆ, ಕಮಲ ಅನ್ನುವುದು ತವರು ಮನೆಯ ಹೆಸರಂತೆ. 

ಗಂಡನ ಮನೆಯವರೆಲ್ಲಾ ತನ್ನನ್ನು ಬೇರೆ ಯಾವುದೋ ಹೆಸರಿನಿಂದ ಕರೆಯುವಾಗ ಆಕೆಗೆ ಅದೆಷ್ಟು ಬೇಸರವಾಗುತ್ತಿದ್ದಿರಬಹುದು? ತನ್ನನ್ನು ಹಳೆಯ ಹೆಸರಿನಿಂದ ಯಾರಾದರೂ ಮಾತನಾಡಿಸಿದಾಗ ಅವರಿಗೆ ಅದೆಷ್ಟು ಸಂತಸವಾಗಿರಬಹುದು ಅಂತ ಯೋಚಿಸಿದಾಗ ನನಗೂ ಖುಷಿಯಾಯ್ತು.

ಹುಟ್ಟಿದ ಘಳಿಗೆ ಸರಿ ಇಲ್ಲ, ನಕ್ಷತ್ರ ಸರಿ ಇಲ್ಲ ಎಂಬ ಕಾರಣ ಮುಂದಿಟ್ಟು ಹೆಣ್ಣುಮಕ್ಕಳ ಹೆಸರು ಬದಲಾಯಿಸಲಾಗುತ್ತದೆ. ಅವರಿಷ್ಟ ಯಾರೂ ಕೇಳುವುದೇ ಇಲ್ಲ. ತನಗೆ ಇಂತಹ ಹೆಸರೇ ಇಡಬೇಕಿತ್ತು ಅಂತ ಯಾರೂ ಹೇಳುವುದಿಲ್ಲವಾದರೂ, ಇಟ್ಟ ಹೆಸರು ಅಭ್ಯಾಸವಾದ ಮೇಲೆ ಬೇರೆ ಹೆಸರು ಇಡುವಾಗ ಸಹಜವಾಗಿ ಅವರಿಗೆ ಬೇಸರವಾಗುತ್ತದೆ. 

ತಮ್ಮನ್ನು ತಮ್ಮ ಹೆಸರಿನಿಂದಲ್ಲದೇ ಬೇರೆ ಹೆಸರಿನಿಂದ ಕರೆಯುವಾಗ ಅದು ತಾವೇ ಅಂತ ತಿಳಿಯಲು ಅವರಿಗೇ ಸ್ವಲ್ಪ ಸಮಯ ಹಿಡಿಯುತ್ತದೆ. ಇನ್ನು ಬೇರೆಯವರ ಪಾಡೇನು?

ನಮ್ಮಲ್ಲಿ ಹೆಸರಿಡುವ ಶಾಸ್ತ್ರವಾದ ನಾಮಕರಣ ಶಾಸ್ತ್ರವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ ಮದುವೆಯಾದ ನಂತರ ಗಂಡನ ಮನೆಯವರು ಯಾವುದೇ ಖರ್ಚಿಲ್ಲದೇ ಸುಲಭವಾಗಿ ಆಕೆಯ ಹೆಸರನ್ನು ಬದಲಿಸಿ ಬಿಡುತ್ತಾರೆ. 

ಹೆಸರು ಬದಲಾಯಿಸಿದ ಮಾತ್ರಕ್ಕೆ ವ್ಯಕ್ತಿತ್ವ ಬದಲಿಸಲು ಸಾಧ್ಯವೇ? ತವರಿನ ಪಾಲಿಗೆ ಅವಳು ಅದೇ ಪ್ರೇಮಮಯಿ‌ ಮಗಳು, ವಾತ್ಸಲ್ಯಮಯಿ ಸಹೋದರಿಯೇ ಆಗಿರುತ್ತಾಳೆ. ಮೊದಲೇ ಹೆಣ್ಣು ತನ್ನ ಸ್ವಂತ ನೆಲೆ ಕಂಡುಕೊಳ್ಳಲು ಬಹಳ ಹೋರಾಟ ನಡೆಸುತ್ತಾಳೆ. ಅದರ ಜೊತೆ ಈ ಹೆಸರಿನ ಬದಲಾವಣೆ ಅವಳಲ್ಲಿ ಬಹಳಷ್ಟು ಋಣಾತ್ಮಕ ಚಿಂತನೆ ಹುಟ್ಟು ಹಾಕಿ ಆಕೆಯ ಮಾನಸಿಕ ಬೆಳವಣಿಗೆಗೆ ತಡೆಯೊಡ್ಡುತ್ತದೆ.

**************
ಕೆ.ಎ.ಸೌಮ್ಯ
ಮೈಸೂರು

Published in vishwavani a vivah on 13.03.2019

Popular Posts