ತಾಯಿಯೊಳಗಿನ ಯಶೋಧೆ (VK) : ಮಹಿಳಾ ಲೇಖನ
'ಯಶೋಧೆ' ನಿಜಕ್ಕೂ ಭಾಗ್ಯವಂತೆಯೇ ಅಥವಾ ಅವಳದ್ದು ದೌರ್ಭಾಗ್ಯವೇ ಎಂಬ ದ್ವಂದ್ವ ಸಾಮಾನ್ಯರಿಗೆ ನಿಲುಕುವಂಥದ್ದಲ್ಲ. ಭೂಮಂಡಲಗಳ ಒಡೆಯನಾದ ಮಹಾವಿಷ್ಣುವೇ ಆಕೆಯ ಮಗನಾಗಿ ಅವತರಿಸಿ ಬಂದಿದ್ದ. ತನ್ನ ಬಾಲಲೀಲೆಗಳಿಂದ ಆಕೆಯನ್ನು ರಂಜಿಸಿ ಅತ್ಯಂತ ಸಂತೋಷ ನೀಡಿದ್ದ. ಒಂದಲ್ಲ, ಎರಡಲ್ಲ ಬರೋಬ್ಬರಿ ಹದಿನಾರು ವರ್ಷ ಕಾಲ ಯಶೋಧೆಯ ಜೊತೆಗಿದ್ದು ಆಕೆಯ ಜೊತೆ ತನ್ನ ಭಾವನೆಗಳನ್ನು ಹಂಚಿಕೊಂಡಿದ್ದ. ಆದರೆ ಒಂದು ದಿನ ಆತ ದಿಢೀರನೆ ಹೊರಟು ನಿಂತಾಗ ಆಕೆಯ ಮನಸ್ಸು ಹೇಗೆ ತಳಮಳಿಸಿರಬಹುದು?
ಕೃಷ್ಣ ತನ್ನ ಮಗನಲ್ಲ ಅಂತ ಆಕೆ ಹೇಗೆ ತಿಳಿದಾಳು?
ಒಬ್ಬ ಹೆಣ್ಣು ತಾಯಿಯಾಗಲು ಮಗುವನ್ನು ತಾನೇ ಹೆರಬೇಕಿಲ್ಲ. ಯಾರೋ ಹೆತ್ತ ಮಕ್ಕಳಿಗೂ ತಾಯಿಯಾಗಬಲ್ಲವರು ಅವರು. ಇನ್ನು ತನ್ನದೇ ಮಗನೆಂದುಕೊಂಡ ಕೃಷ್ಣನನ್ನು ಆಕೆ ಎಷ್ಟು ಹಚ್ಚಿಕೊಂಡಿರಬಹುದು? ಆತನನ್ನು ಅಗಲಿ ಬದುಕುವುದು ಆಕೆಗೆ ಅದೆಷ್ಟು ಕಷ್ಟವಾಗಿರಬಹುದು?
ಗಂಡುಮಕ್ಕಳು ಬಿಡಿ. ಹೊರಪ್ರಪಂಚಕ್ಕೆ ಕಾಲಿಟ್ಟೊಡನೆಯೇ ಪ್ರತಿನಿತ್ಯ ಹೊಸ ಹೊಸ ವಿಷಯಗಳನ್ನು ಎದುರುಗೊಳ್ಳುತ್ತಾ ಹಳೆಯದನ್ನು ಮರೆಯುತ್ತಾ ಬರುತ್ತಾರೆ. ಆದರೆ ಯಶೋಧೆ ಇನ್ನೂ ಅದೇ ಮನೆಯಲ್ಲಿಯೇ ಇದ್ದಳಲ್ಲ..
ಕೃಷ್ಣ ಬೆಳೆದ ಮನೆಯಲ್ಲಿ!!
ಕಣ್ಣು ಹಾಯಿಸಿದಲ್ಲೆಲ್ಲಾ ಆಕೆಗೆ ಕೃಷ್ಣನ ಪ್ರತಿಬಿಂಬವೇ ಕಂಡಿರಬಹುದು. ಅಲ್ಲಿರದಿದ್ದರೂ ಆತ ಎಲ್ಲಿಯಾದರೂ ಎಡವಿದನೇನೋ, ಪೆಟ್ಟು ಮಾಡಿಕೊಂಡನೇನೋ ಎನ್ನುವ ಆತಂಕ ಕಾಡುತ್ತಲೇ ಇದ್ದಿರಬಹುದು. ಆತನಿಲ್ಲ ಅಂತ ಮನಸ್ಸಿಗೆ ಎಷ್ಟು ಹೇಳಿಕೊಂಡರೂ ಒಪ್ಪಿಕೊಳ್ಳದೇ ಆಟವಾಡಿಸುತ್ತಿರಬಹುದು. ಮಗಳನ್ನು ಗಂಡನ ಮನೆಗೆ ಕಳಿಸಿದ ನಂತರ ತಾಯಿಯಲ್ಲಿ ಕಾಣುವ ದುಗುಡವೇ ಈಗಲೂ ಆಕೆಯಲ್ಲಿರುವುದು.
ಎಲ್ಲಾ ತಾಯಿಯರೂ ಯಶೋಧೆಯಂತೆಯೇ...
ಮಗನಿಗೆ ಇಷ್ಟವಾದ ತಿಂಡಿ ಮಾಡಿದಾಗ, ಮನೆಯ ಉಳಿದ ಸದಸ್ಯರು ಅದನ್ನು ನಿರ್ಭಾವುಕತೆಯಿಂದ ತಿನ್ನುವಾಗ ತಾಯಿಗೆ ಮಗನ ನೆನಪೇ ಆಗುತ್ತಿರುತ್ತದೆ. ಒಂದು ಹನಿ ಕಣ್ಣೀರು ಹಾಕದೇ ಆಕೆ ಅದನ್ನು ತಿನ್ನಲಾರಳು. ಮಗನಾದರೂ ರಜೆ ಸಿಕ್ಕಾಗೊಮ್ಮೆ ಬಂದಾನು? ಆದರೆ ಯಶೋಧೆಗೆ ಕೃಷ್ಣ.....?
ಹೆಣ್ಣು ಮಗು ಹುಟ್ಟಿದಾಗಿನಿಂದಲೂ ಆಕೆ ಬೇರೆ ಮನೆಗೆ ಸೇರುವವಳು ಅಂತ ಪದೇ ಪದೇ ಹೇಳಿ, ಅವಳು ಈ ಮನೆಗೆ ಸೇರಿದವಳಲ್ಲ ಎಂಬ ಭಾವ ಎಲ್ಲರ ಮನಸ್ಸಿನಲ್ಲಿ ಹುಟ್ಟಿಸಿಬಿಟ್ಟಿರುತ್ತಾರೆ. ಆದರೆ ಮಗ?? ಆತ ಕಡೆವರೆಗೂ ತಮ್ಮ ಬಳಿಯೇ ಇರುತ್ತಾನೆ ಎಂಬ ಧನಾತ್ಮಕ ಚಿಂತನೆಯೇ ತಾಯಿಯಲ್ಲಿರುತ್ತದೆ. ಆದರೆ ಆತನೂ ಹೊರಟು ನಿಂತಾಗ ತಾಯಿ ಏನು ಮಾಡಬೇಕು? ತನ್ನನ್ನು ತಾನು ಸಂತೈಸಿಕೊಳ್ಳಬೇಕೋ ಅಥವಾ ಮಗನನ್ನೋ?
ಅಂತಹ ಸಂದರ್ಭದಲ್ಲಿ ಆಕೆ ಯಶೋಧೆಯಾಗುತ್ತಾಳೆ.
ಮಗನಿಗೆ ತನ್ನ ದುಃಖ ತಿಳಿಯದಂತೆ ಎಚ್ಚರ ವಹಿಸುತ್ತಾಳೆ. ತನ್ನ ಕಣ್ಣೀರಿನಿಂದ ಆತನ ಮುಂದಿನ ಜೀವನ ತೊಡಕಾಗದಿರಲಿ ಎಂದು ನಗುನಗುತ್ತಲೇ ಮಗನನ್ನು ಕಳಿಸಿಕೊಡುತ್ತಾಳೆ. ಆದರೆ ಒಳಗೊಳಗೆ ಆಕೆ ಬೆಂದು ಬೂದಿಯಾಗುತ್ತಿರುವುದು ಯಾರ ಗಮನಕ್ಕೂ ಬರುವುದಿಲ್ಲ.
ಹೆಣ್ಣುಮಕ್ಕಳಿಗೆ ವಿದಾಯ ಹೇಳುವಾಗಲಷ್ಟೇ ಕಣ್ಣೀರಾಗುವುದಿಲ್ಲ ತಾಯಿ... ಗಂಡುಮಕ್ಕಳನ್ನು ಅಗಲುವಾಗಲೂ ಯಾರಿಗೂ ಕಾಣದಂತೆ ಕಣ್ಣೀರು ಹಾಕುತ್ತಾಳೆ.... ಥೇಟ್ ಯಶೋಧೆಯಂತೆಯೇ!!
(ದಿನಾಂಕ 28.08.2021ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ)
********
ಕೆ.ಎ.ಸೌಮ್ಯ
ಮೈಸೂರು

