ಮದುವೆ ಮುರಿಯುತ್ತಿರುವುದಕ್ಕೆ ಕಾರಣಗಳು
ಮದುವೆಯ ಬಗ್ಗೆ ಮಾತನಾಡಲು ನಮಗೆಲ್ಲರಿಗೂ ಬಹಳ ಉತ್ಸಾಹ. ಮದುವೆ ಅಂದರೇನೇ ಏನೋ ಸಂಭ್ರಮ. ಅದು ನಮ್ಮ ಮದುವೆಯಾಗಿರಬಹುದು ಅಥವಾ ಬೇರೆಯವರ ಮದುವೆ ಆಗಿರಬಹದು. ಸಂಭ್ರಮಕ್ಕೇನೂ ಕೊರತೆಯಿಲ್ಲ.
ಬೀದಿಯಲ್ಲಿ ಓಡಾಡುತ್ತಿರುವ ಹುಡುಗಿಯರನ್ನು ಕರೆದು ನಿಲ್ಲಿಸಿ ಮಾತನಾಡಿಸಿದರೂ ಸಾಕು, ತನ್ನ ಕನಸಿನ ಹುಡುಗ ಹೀಗಿರಬೇಕು, ಹಾಗಿರಬೇಕು ಅಂತ ಒಂದು ದೊಡ್ಡ ಲಿಸ್ಟ್ ಅನ್ನೇ ಹೇಳುತ್ತಾರೆ.
ತಮ್ಮ ಜೀವನದ ಒಂದು ಮಹತ್ವದ ತಿರುವು ಈ ಮದುವೆ ಅಂತ ಎಲ್ಲರೂ ತಿಳಿದಿದ್ದಾರೆ. ಹೀಗಿರುವಾಗ ತಮ್ಮ ಜೀವನದ ಅನಿವಾರ್ಯ ಅಂಗವಾದ ಮದುವೆಗಳು ಶುರುವಿನಲ್ಲಿಯೇ ಬಿರುಕು ಮೂಡಿಸುವುದ್ಯಾಕೆ?
ಮೊದಲಿಗೆ ಜಾತಕ ಹೊಂದಿಸಿ, ಅದು ಸರಿಯಾಗಿದ್ದರೆ ಗಂಡು-ಹೆಣ್ಣು ಪರಸ್ಪರ ಭೇಟಿಯಾಗಿ ತಮ್ಮ ಇಷ್ಟಾನಿಷ್ಟಗಳನ್ನೆಲ್ಲ ಹಂಚಿಕೊಂಡು, ಕಷ್ಟದಲ್ಲೂ-ಸುಖದಲ್ಲೂ ಭಾಗಿಯಾಗುತ್ತೇವೆ ಅಂತ ಭಾಷೆ ಕೊಟ್ಟು ಮಾಡಿಕೊಂಡ ಮದುವೆಗಳು ಯಾಕೆ ಡೈವೋರ್ಸಿನಲ್ಲಿ ಅಂತ್ಯವಾಗುತ್ತಿವೆ? ಇದರ ಅರ್ಥ ಮದುವೆಯ ಆರಂಭವೇ ಸರಿಯಿಲ್ಲವೇ?
1) ಮದುವೆಯೆಂದರೆ ತ್ಯಾಗ ಎಂದು ಅರ್ಥಮಾಡಿಕೊಳ್ಳದಿರುವುದು:
ಮದುವೆಗೆ ಮೊದಲು ಇಬ್ಬರ ಆಸಕ್ತಿ ಏನೇ ಇರಲಿ, ಮದುವೆಯ ನಂತರ ತಮಗಿಷ್ಟವಿಲ್ಲದಿದ್ದರೂ ಸಂಗಾತಿಯ ಆಸಕ್ತಿಗೆ ಬೆಲೆ ಕೊಡಲೇಬೇಕಾಗುತ್ತದೆ. ಹೌದು. ತಮ್ಮ ತಮ್ಮ ಸಂಗಾತಿಗಾಗಿ ಕೆಲವು ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ.
ಏಕೆಂದರೆ ಮದುವೆಯ ನಂತರ "ನನ್ನದು" ಎನ್ನುವುದು ಏನೂ ಇರುವುದಿಲ್ಲ.
ಅದು "ನಮ್ಮದು" ಅಂತಾಗಬೇಕು.
ಮದುವೆ ಕೊನೆಗೊಳಿಸಲು ಸಾವಿರ ಕಾರಣ ಸಿಗಬಹುದು. ಆದರೆ ಅದರಲ್ಲಿಯೂ ಒಳ್ಳೆಯದನ್ನು ಹುಡುಕಿ ಸಂಬಂಧ ಉಳಿಸಿಕೊಳ್ಳಲು ನೋಡಬೇಕು. ಅದೇ ಯಶಸ್ವೀ ದಾಂಪತ್ಯ.
2) ಪರಿಪೂರ್ಣತನದ ಹುಡುಕಾಟದಲ್ಲಿ ನಾವು ಪರಿಪೂರ್ಣರಾಗಲು ಮರೆಯುತ್ತೇವೆ:
ಮದುವೆ-ಸಂಗಾತಿ ಎಂದರೆ ನಮಗೆ ಏನೋ ಒಂದಷ್ಟು ನಿರೀಕ್ಷೆಗಳು ಇರುತ್ತವೆ. ಅವರು ಹಾಗಿರಬೇಕು, ಹೀಗಿರಬೇಕು ಅಂತ. ಮದುವೆಯಾದ ಮೇಲೆಯೂ ನಮ್ಮ ಸಂಗಾತಿಯನ್ನು ನಮ್ಮ ನಿರೀಕ್ಷೆಗೆ ತಕ್ಕಂತೆಯೇ ನೋಡುತ್ತೇವೆಯೇ ಹೊರತೂ, ಅವರಿಗೂ ಸಹ ನಮ್ಮ ಮೇಲೆ ಇದೇ ರೀತಿ ನಿರೀಕ್ಷೆಗಳಿರುತ್ತವೆ ಎಂಬುದನ್ನು ಮರೆಯುತ್ತೇವೆ.
ಪರಿಪೂರ್ಣತೆಯನ್ನು ಹುಡುಕುತ್ತಾ ನಾವೂ ಪರಿಪೂರ್ಣರಲ್ಲ ಅನ್ನುವುದು ಉದ್ದೇಶಪೂರ್ವಕವಾಗಿ ಮರೆಯುತ್ತೇವೆ. ಅದರ ಬದಲು ಸಂಗಾತಿಯ ನಿರೀಕ್ಷೆಗೆ ತಕ್ಕಂತೆ ನಮ್ಮನ್ನು ನಾವು ರೂಪಿಸಿಕೊಂಡರೆ ಅವರ ಹುಡುಕಾಟ ಪೂರ್ಣವಾಗುತ್ತದೆ ಅಲ್ಲವೇ?
3) ಪ್ರೀತಿ ಎಂದರೆ ಕೇವಲ ಪ್ರೀತಿಯಲ್ಲ:
ಪ್ರೀತಿ ಎನ್ನುವ ಪದ ಮಮತೆ, ಕರುಣೆ, ಅನುಕಂಪ, ಅನುರಾಗ ಮುಂತಾದ ಪದಗಳ ಜೊತೆ ಬೆಸುಗೆಯಾಗಿದೆ. ಪ್ರೀತಿ ಎಂದಿಗೂ ಒಂಟಿಯಲ್ಲ. ಪ್ರೀತಿಯ ಜೊತೆ ಕಾಳಜಿ ಸದಾ ಇರುತ್ತದೆ. ನಾವು ಪ್ರೀತಿಸುವ ವ್ಯಕ್ತಿಯ ಕಾಳಜಿಯನ್ನು ನಾವು ಸದಾ ನಮಗಿರಿವಿಲ್ಲದೇ ಮಾಡಿರುತ್ತೇವೆ. ಪ್ರೀತಿ ಕೇವಲ ಮನಸ್ಸಿನಲ್ಲಿರುವ ಒಂದು ಅನುಭೂತಿ ಮಾತ್ರವಲ್ಲ, ನಾವು ನಮ್ಮ ಪ್ರೀತಿಯನ್ನು ಹೊರಗೂ ಸಹ ತೋರಿಸಿಕೊಳ್ಳುತ್ತೇವೆ.
ಪ್ರೀತಿ ಎಂಬುದು ಒಂದು ಕ್ರಿಯೆಯಾಗಿದೆ. ಇದರ ಅರ್ಥ ನನ್ನಲ್ಲಿ ನಿನ್ನ ಬಗ್ಗೆ ಪ್ರೀತಿ ಇದೆ ಅಂತ ಭಾಷಣ ಹೊಡೆದು ಸುಮ್ಮನಾದರೆ ಸಾಲದು. ಪ್ರೀತಿ ಇರುವುದನ್ನು ತೋರಿಸಲೂ ಬೇಕು. ಪ್ರತಿನಿತ್ಯದ ನಮ್ಮ ಚಟುವಟಿಕೆಯಲ್ಲಿ ನಮ್ಮ ಪ್ರೀತಿ ಪಾತ್ರರ ಮೇಲಿನ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಿರಬೇಕು. ಇಲ್ಲದಿದ್ದರೆ ಪ್ರೀತಿ ಇದ್ದೂ ಇಲ್ಲದಂತಾಗುತ್ತದೆ. ಸಂಬಂಧಗಳಲ್ಲಿ ಬಿರುಕು ಮೂಡಲು ಆರಂಭವಾಗುತ್ತದೆ.
4) ಸಂಗಾತಿ ಎಂದರೆ ಸೂಪರ್ ಮ್ಯಾನ್ ಎಂಬ ಭ್ರಮೆ:
ಈ ಭ್ರಮೆ ಬಂದಿರುವುದು ಬಹುಶಃ ಸಿನೆಮಾಗಳಿಂದ ಬಂದಿರಬಹುದು. ನಾವು ಹೇಳದಿದ್ದರೂ ಅವರೇ ಅರ್ಥ ಮಾಡಿಕೊಂಡು ನಮ್ಮನ್ನು ಸಂತೈಸುವ, ದುಃಖವಾದಾಗ ನಮ್ಮನ್ನು ನಗಿಸುವ, ನಾವು ನಗುವಾಗ ನಮ್ಮನ್ನು ಪ್ರೀತಿಸುವ ಸಂಗಾತಿಯ ನಿರೀಕ್ಷೆಯಲ್ಲಿರುತ್ತೇವೆ. ಆದರೆ ಅವರೂ ಸಹ ಮನುಷ್ಯರಲ್ಲವೇ? ನಾವೇನೂ ಹೇಳದೇ ಅವರೇ ಅರ್ಥ ಮಾಡಿಕೊಳ್ಳಲಿ ಎಂದರೆ ಸಾಧ್ಯವೇ? ಅವರು ನಮ್ಮ ನೋವು-ನಲಿವನ್ನು ಗಮನಿಸುತ್ತಿಲ್ಲ ಎಂಬ ಆರೋಪ ನಮಗಿದ್ದರೆ, ನಾವೇ ನಮ್ಮ ನೋವು-ನಲಿವುಗಳನ್ನು ಅವರೊಂದಿಗೆ ಹಂಚಿಕೊಂಡರಾಯಿತು. ಹಾಗೆಯೇ ಅವರ ಕಷ್ಟ ಸುಖದಲ್ಲಿ ನಾವು ಭಾಗಿಯಾದಾಗಲೇ ಮದುವೆಗೆ ಒಂದು ಅರ್ಥ ಬರುವುದು ಅಲ್ಲವೇ?
ಮದುವೆ ಎಂದರೆ ಹೊಂದಿಕೊಂಡು ಹೋಗುವುದು, ಆತನ/ ಆಕೆಯ ದೌರ್ಬಲ್ಯಗಳನ್ನು ಸಹಿಸುವುದು, ಪರಸ್ಪರ ಸಹಕರಿಸುವುದು ಎಂದರ್ಥ. ಶಾಂತಚಿತ್ತರಾಗಿ ಇವೆಲ್ಲಾ ಅಂಶಗಳನ್ನು ಮನದಲ್ಲಿ ಇಟ್ಟುಕೊಂಡು ಹೊಂದಿಕೊಂಡು ಹೋಗಲು ಪ್ರಯತ್ನಿಸಬೇಕು. ಬದಲಾಗಿ ಕೇವಲ ಸಂಗಾತಿಗಳಲ್ಲಿನ ಹುಳುಕುಗಳನ್ನು ಮಾತ್ರ ಕಂಡು ಮದುವೆ ಮುರಿದುಕೊಳ್ಳಲು ಯತ್ನಿಸಬಾರದು.
ಮದುವೆ ಮುರಿದುಕೊಳ್ಳುವುದು ಬಹಳ ಸುಲಭ. ಆದರೆ ಮುರಿಯದಂತೆ ಮದುವೆಯನ್ನು ಕಟ್ಟಿಕೊಳ್ಳುವುದು ಬಹಳ ಕಷ್ಟ.
**************************
ಹೆಸರು:-ಕೆ.ಎ.ಸೌಮ್ಯ, ಮೈಸೂರು


