ಸೋಲೋ ವೆಡ್ಡಿಂಗ್
ಅಲ್ಲಿ ಮದುವೆ ನಡೆಯುತ್ತಿರುತ್ತದೆ. ಬಂಧು ಮಿತ್ರರೆಲ್ಲರೂ ಸೇರಿರುತ್ತಾರೆ. ವಧು ಸಿಂಗಾರ ಮಾಡಿಕೊಂಡು ಮಹಡಿಯಿಂದ ಕೆಳಗಿಳಿದು ಬರುತ್ತಾಳೆ. ತನ್ನ ಮದುವೆಯ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾಳೆ. ಇದೆಲ್ಲದರ ಫೋಟೋ ಶೂಟ್ ಸಹ ನಡೆಯುತ್ತದೆ. ನಂತರ ಬುಕ್ ಮಾಡಿದ್ದ ಹನಿಮೂನ್ ಸ್ಥಳಕ್ಕೆ ವಧು ಹೋಗಿಯೂ ಬಿಡುತ್ತಾಳೆ. ಆದರೆ ಒಂಟಿಯಾಗಿ...!!! ಆಶ್ಚರ್ಯ ಆಯ್ತಾ? ಹೌದು. ಇದೇ ಸೋಲೋ ವೆಡ್ಡಿಂಗ್.
ಅಂದರೆ ತನ್ನನ್ನು ತಾನೇ ಮದುವೆಯಾಗುವುದು.
ಅಲ್ರೀ.... ತನ್ನನ್ನು ತಾನೇ ಮದುವೆ ಆಗುವುದಕ್ಕೆ ಇಷ್ಟೆಲ್ಲಾ ಖರ್ಚು ಮಾಡಬೇಕಿತ್ತಾ? ಅಂತ ಯಾರಾದರೂ ಪ್ರಶ್ನೆ ಮಾಡಬಹುದು. ಮದುವೆಯಾಗಲು ವರನೊಬ್ಬನಿಲ್ಲ ಅಷ್ಟೇ. ಉಳಿದ ಸಂಭ್ರಮಗಳೆಲ್ಲವೂ ಇದ್ದೇ ಇದೆಯಲ್ಲ. ವೆಡ್ಡಿಂಗ್ ಡ್ರೆಸ್, ವೆಡ್ಡಿಂಗ್ ಕೇಕ್, ಹನಿಮೂನ್ ಎಲ್ಲವೂ ಇದೆ. ಆದರೆ ಸಂಭ್ರಮಿಸುವವಳು ವಧು ಒಬ್ಬಳು ಮಾತ್ರ. ಏಕೆಂದರೆ ಅವಳಿಗೆ ಇಂಥದ್ದೇ ಡ್ರೆಸ್ ಹಾಕಿಕೋ ಅಂತ ಹೇಳಲು ವರನಿಲ್ಲ, ಹೀಗೆಯೇ ನಡೆದುಕೋ ಅಂತ ಹೇಳಲು ಅತ್ತೆ-ಮಾವರಿಲ್ಲ. ಎಲ್ಲಕ್ಕಿಂತ ಮುಖ್ಯವಾದ ಅಂಶ ಎಂದರೆ, ಆಕೆ ತನ್ನನ್ನು ತಾನೇ ಮದುವೆಯಾದರೆ ತನ್ನ ಹೆಸರಿನ ಕೊನೆಗೆ ಗಂಡನ ಹೆಸರು ಸೇರಿಸುವಂತಿಲ್ಲ.
ಸೋಲೋ ವೆಡ್ಡಿಂಗ್ ಎನ್ನುವುದು ಪ್ರಪಂಚದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಈ ಕಾನ್ಸೆಪ್ಟ್ ಬಹಳ ಸರಳವಾಗಿದ್ದು ಕೇವಲ ಒಂದು ಕನ್ನಡಿಯ ಮುಂದೆ ನಿಂತು ತನಗೆ ತಾನೇ ಆಶ್ವಾಸನೆ ಕೊಟ್ಟು ಮದುವೆಯ ಕಾರ್ಯವನ್ನು ಮುಗಿಸಬಹುದಾಗಿದೆ. ಆದರೆ ಈಗ ಸೋಲೋ ವೆಡ್ಡಿಂಗ್ ಮಾಡಿಸಲು ಹಲವಾರು ಏಜೆನ್ಸಿಗಳು ಮುಂದಾಗಿ ನಿಂತಿವೆ. ವಧುವಿನ ಫೋಟೋ ಶೂಟ್, ಆಕೆಯ ಡ್ರೆಸ್ ಡಿಸೈನಿಂಗ್ ಮತ್ತು ಹನಿಮೂನ್ ಪ್ಯಾಕೇಜ್ ಸಹ ಒಳಗೊಂಡಿದ್ದು ಈ ಪ್ರಕ್ರಿಯೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಇದೊಂದು ಬ್ಯುಸಿನೆಸ್ಸಾಗಿ ಮಾರ್ಪಾಟಾಗಿರುವುದು ವಿಷಾದನೀಯ.
ಇನ್ನೊಬ್ಬರಿಗಾಗಿ ತಾನು ಸುಂದರವಾಗಿ ಕಾಣಲು ಹೆಣಗಾಡಿ ಸೋಲುವ ಬದಲು ತಾನು ಹೇಗೆ ಇದ್ದೇನೆಯೋ ಹಾಗೆಯೇ ತನ್ನನ್ನು ತಾನು ಒಪ್ಪಿಕೊಂಡು ಮದುವೆಯಾದರೆ ಪ್ರತಿಯೊಂದು ವಿಷಯಕ್ಕೂ ಮತ್ತೊಬ್ಬರನ್ನು ಮೆಚ್ಚಿಸುವ ಅಗತ್ಯ ಇರುವುದಿಲ್ಲ ಎಂಬುದು ಸೋಲೋ ವೆಡ್ಡಿಂಗ್ ಮಾಡಿಕೊಳ್ಳುವವರ ಅಭಿಪ್ರಾಯ. ಮುಖ್ಯವಾಗಿ ಹೆಣ್ಣುಮಕ್ಕಳು ಇದರ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಎಷ್ಟೇ ಇಷ್ಟ ಪಟ್ಟು ಪ್ರೀತಿಸಿ ಮದುವೆಯಾದರೂ, ತನ್ನ ಗಂಡನ ಗಮನ ಬೇರೆಡೆಗೆ ಹೋಗದಂತೆ ತಡೆಯಲು ಜೀವನಪೂರ್ತಿ ಹೆಣಗಾಡಬೇಕು. ಮದುವೆಯ ಸಮಯದಲ್ಲಿ ಆತ ಮಾಡಿದ್ದ ವಾಗ್ದಾನವನ್ನು ಒಂದೆರೆಡು ಮಕ್ಕಳಾಗುತ್ತಿದ್ದಂತೆಯೇ ಮರೆತು ಬಿಡುತ್ತಾನೆ. ಆತನ ಕಣ್ಣು ಹೊಸ ಹುಡುಗಿಯರ ಕಡೆ ಹರಿಯಲು ಶುರುವಾಗುತ್ತದೆ. ತಾಯ್ತನದ ನಂತರ ತನ್ನ ದೇಹವನ್ನು ಮೊದಲಿನಂತೆ ಹರೆಯವಾಗಿಡಲು ಪ್ರಯತ್ನಿಸಿ ಸೋಲುತ್ತಾಳೆ ಹೆಣ್ಣು. ತಾನು ಹೇಗಿದ್ದೇನೆಯೋ ಹಾಗೆಯೇ ತನ್ನನ್ನು ಒಪ್ಪಿಕೊಳ್ಳಬಾರದೇ ಅಂತ ಹಂಬಲಿಸುತ್ತಾಳೆ.
ಆದರೆ ವಾಸ್ತವವಾಗಿ ಪ್ರೀತಿಗೆ ಮೂಲವೇ ಆಕರ್ಷಣೆ.
ಎಲ್ಲೋ ಕೆಲವರಲ್ಲಿ ಅದು ಆಕರ್ಷಣೆಯ ಹಂತ ದಾಟಿ ಆತ್ಮಕ್ಕೆ ಬೆಸೆದುಕೊಂಡಿರುತ್ತದೆ. ಆದರೆ ಬಹುತೇಕರು ಆಕರ್ಷಣೆಯ ಹಿಂದೆ ಹೋಗುವವರೇ. ಅದರಲ್ಲಿಯೂ ಪಾಶ್ಚಾತ್ಯರಲ್ಲಿ ಒಮ್ಮೆ ಮದುವೆಯಾದೊಡನೆಯೇ ಜೀವನಪೂರ್ತಿ ಅವರೊಂದಿಗೆ ಕಡ್ಡಾಯ ಸಂಸಾರ ಮಾಡಲೇಬೇಕು ಎಂಬ ನಿಯಮ ಇಲ್ಲದೇ ಇರುವುದರಿಂದ ಅವರು ಹೊಸ ಹೆಣ್ಣನ್ನು ಹುಡುಕುವುದು ಸಹಜ. ಹಾಗಾಗಿ ನಿಜವಾದ ಪ್ರೀತಿ ಸಿಗದೇ ನೊಂದ ಮಹಿಳೆಯರು ಸೋಲೋ ವೆಡ್ಡಿಂಗ್ ನತ್ತ ಮನಸ್ಸು ಮಾಡುತ್ತಿದ್ದಾರೆ.
ಇದು ಮಹಿಳೆಯರಲ್ಲಿ ಆತ್ಮವಿಶ್ವಾಸ ಹುಟ್ಟುಹಾಕಲು ಸಹಕಾರಿ ಎಂದು ಕೆಲವರ ಅಭಿಮತವಾಗಿದೆ. ಏಕೆಂದರೆ ಮದುವೆಯ ಖರೀದಿಯಲ್ಲಿ ಆಕೆ ತನಗಿಷ್ಟವಾದ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯಾರೇನು ಅಂದುಕೊಳ್ಳುತ್ತಾರೋ ಎಂಬ ಆತಂಕವೇ ಅವಳಿಗೆ ಇರುವುದಿಲ್ಲ. ತಮ್ಮ ಮದುವೆ ಎಲ್ಲಿ ನಡೆಯಬೇಕು ಎಂಬ ನಿರ್ಧಾರ ಸಹ ಹೆಣ್ಣುಮಕ್ಕಳೇ ತೆಗೆದುಕೊಳ್ಳಬಹುದಾಗಿದೆ.
ಮನೆಯ ಹಿರಿಯರ ಅಪ್ಪಣೆಯಿಲ್ಲದೇ ಒಂದು ಚಿಕ್ಕ ನಿರ್ಧಾರ ತೆಗೆದುಕೊಳ್ಳದ ಹೆಣ್ಣುಮಕ್ಕಳು ತಮ್ಮ ಮದುವೆಯ ಬಗ್ಗೆ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ನಿಜಕ್ಕೂ ಆಕೆಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಸೋಲೋ ವೆಡ್ಡಿಂಗ್ ನ ಗಣನೀಯ ಅಂಶವೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತಮ್ಮನ್ನು ತಾವು ವಿವಾಹವಾಗುತ್ತಿದ್ದಾರೆ. ಬೆರಳೆಣಿಕೆಯಷ್ಟು ಪುರುಷರು ಮಾತ್ರವೇ ಸೋಲೋ ವೆಡ್ಡಿಂಗ್ ಮಾಡಿಕೊಳ್ಳುತ್ತಿದ್ದಾರೆ ಹೊರತೂ ಮಹಿಳೆಯರೇ ಮುಂಚೂಣಿಯಲ್ಲಿರುವುದು.
ಸಂಬಂಧಗಳಲ್ಲಿ ವಿಶ್ವಾಸ ಕಳೆದುಕೊಂಡ ಮಹಿಳೆ ತನ್ನನ್ನು ತಾನೇ ವಿವಾಹವಾಗಿ ಕಳೆದುಹೋದ ಆತ್ಮವಿಶ್ವಾಸ ಪಡೆಯುವ ನಿಟ್ಟಿನಲ್ಲಿದ್ದಾಳೆ. ಸಂತೋಷ ತನ್ನೊಳಗೇ ಇದೆ, ತಾನು ಸಂತಸವಾಗಿರಲು ಮತ್ತೊಬ್ಬರ ಅವಶ್ಯಕತೆ ಇಲ್ಲ ಎಂದು ಸಾರುತ್ತಿದ್ದಾಳೆ. ಪುರುಷನಿಲ್ಲದೇ ಮಹಿಳೆಯ ಅಸ್ತಿತ್ವ ಇಲ್ಲ ಎನ್ನುವ ಸಮಾಜದ ನಂಬಿಕೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾಳೆ. ಅಲ್ಲದೇ ಪ್ರತೀವರ್ಷವೂ ಮದುವೆ ವಾರ್ಷಿಕೋತ್ಸವವನ್ನೂ ಒಂಟಿಯಾಗಿ ಆಚರಿಸಿಕೊಳ್ಳುವ ಮೂಲಕ ತಾನು ಒಂಟಿಯಾಗಿಯೂ ಬದುಕಬಲ್ಲೆ ಎಂದು ಸಾಧಿಸಿ ತೋರಿಸುತ್ತಿದ್ದಾಳೆ.
ಆದರೆ ಸಮಾಜ ಈ ರೀತಿಯ ವಿವಾಹವನ್ನು ಇನ್ನೂ ಅಂಗೀಕರಿಸಿಲ್ಲ. ಎಲ್ಲಿಯೋ ಎತ್ತರದ ಸ್ಥಾನದಲ್ಲಿ ಕುಳಿತವರೂ, ದುಡ್ಡು-ಪ್ರಖ್ಯಾತಿ ಇರುವವರೂ, ಸಮಾಜದ ಕೆಂಗಣ್ಣಿಗೆ ಗುರಿ ಆಗದವರು ಈ ರೀತಿಯ ಮದುವೆಯಾಗುತ್ತಿದ್ದಾರಷ್ಟೇ. ಇದನ್ನು ಸ್ವ-ವ್ಯಾಮೋಹ ಎಂದೂ ಕೆಲವರು ಕರೆಯುತ್ತಾರೆ. ಆದರೆ ಒಬ್ಬ ಪುರುಷನನ್ನು ಮದುವೆಯಾಗಿ ತನ್ನ ಆಸೆಗಳೆಲ್ಲವನ್ನೂ ತ್ಯಜಿಸಿ ಕೇವಲ ಅವನಿಗಾಗಿ ಬಾಳುವುದಕ್ಕಿಂತಲೂ ಒಂಟಿಯಾಗಿ ಬಾಳುವುದು ಉತ್ತಮ ಎನ್ನುವುದು ಸೋಲೋ ವೆಡ್ಡಿಂಗ್ ಮಾಡಿಕೊಳ್ಳುವವರ ಅಭಿಪ್ರಾಯ.
**********


