ಮದುವೆಗೆ ಯಾಕೆ ಒಪ್ಪುವುದಿಲ್ಲ ಅವಳು

 


ನಿಮಗೆ ಒಂದು ಹುಡುಗಿಯ ಮೇಲೆ ಮನಸ್ಸಾಗುತ್ತದೆ. ಬಹುಶಃ ಅದು ಪ್ರೀತಿ ಇರಬಹುದು ಅಂತ ನಿಮಗ ಅನ್ನಿಸುತ್ತದೆ. ಅವಳಿಲ್ಲದೇ ಈ ಜೀವನಕ್ಕೆ ಅರ್ಥವೇ ಇಲ್ಲ ಅಂತನಿಸಲು ಶುರುವಾಗುತ್ತದೆ. 


ಆಗ ಏನು ಮಾಡುತ್ತೀರಿ ನೀವು? 


ಮತ್ತೇನು ಮಾಡಲು ಸಾಧ್ಯ? ಆ ಹುಡುಗಿಯ ಹಿಂದೆ ಹಿಂದೆ ಅಲೆಯುತ್ತೀರಿ. ಆಗ ನೀವು ಹಿಂಬಾಲಿಸುವ ಹುಡುಗಿ ಹಿಂದೆ ತಿರುಗಿ ನಿಮ್ಮನ್ನು ನೋಡುತ್ತಾಳೆ. ನೋಡಿ ನಗುತ್ತಾಳೆ. ನಿಮ್ಮ ಕಣ್ಸನ್ನೆ ಅರಿಯುತ್ತಾಳೆ. ನಿಮ್ಮ ಮನದಿಂಗಿತದಂತೆ ನಿಮ್ಮ ಇಚ್ಛೆಗೆ ಅನುಗುಣವಾಗಿ ವರ್ತಿಸುತ್ತಾಳೆ. ನಿಮ್ಮ ಜೊತೆ ಅಲೆಯುತ್ತಾಳೆ. ಬೊಗಸೆ ತುಂಬಾ ಪ್ರೀತಿಸುತ್ತಾಳೆ. ನಿಮ್ಮ ಜೊತೆ ಸಂತೋಷದಿಂದ ಕಾಲ ಕಳೆಯುತ್ತಾಳೆ. ಆದರೆ ನಿಮ್ಮನ್ನು ಮದುವೆಯಾಗಲು ಮಾತ್ರ ಒಪ್ಪುವುದಿಲ್ಲ. ಯಾಕೆ?


ಇದು ಸಾಮಾನ್ಯವಾಗಿ ಎಲ್ಲ ಹುಡುಗರ ಪ್ರಶ್ನೆ. 


ಪ್ರೀತಿಸಲು ನಾವು ಬೇಕು, ಮದುವೆಯಾಗಲು ಯಾಕೆ ಬೇಕಿಲ್ಲ ಅಂತ. ಬಹುಶಃ ಇದಕ್ಕೆ ಉತ್ತರ ಇನ್ನೂ ಯಾರಿಗೂ ಸಿಕ್ಕಿಲ್ಲವೇನೋ? ಹುಡುಗಿಯರು ಪ್ರೀತಿಸಲು ಹುಡುಗಾಟದ ಹುಡುಗರನ್ನು ಆರಿಸಿಕೊಂಡರೆ, ಮದುವೆಯಾಗಲು ತೀರಾ ಗಂಭೀರವಾದ ಹುಡುಗರನ್ನು ಆರಿಸಿಕೊಳ್ಳುತ್ತಾರೆ. 


ಏಕೆಂದರೆ ಒಬ್ಬ ಹುಡುಗನ ಜೀನವದ ಗುರಿ ಕೇವಲ ಮದುವೆಯಾಗುವವರೆಗೆ ಮಾತ್ರ ಇದ್ದರೆ, ಹುಡುಗಿಯ ಜೀವನದ ಗುರಿ ಮದುವೆಯಾದ ನಂತರ ಶುರುವಾಗುತ್ತದೆ. ಹಾಗಾಗಿ ತಾನು ಹೇಳಿದಂತೆ ಕೇಳುವ ಹುಡುಗ ಅವಳಿಗೆ ಇಷ್ಟವಾಗುವುದಿಲ್ಲವೇನೋ? ಗೊತ್ತಿಲ್ಲ.


ಹುಡುಗಿಯರು ತಮ್ಮ ಭವಿಷ್ಯದ ಬಗ್ಗೆ ಹೆಚ್ಚೇನೂ ಕನಸು ಕಂಡಿರುವುದಿಲ್ಲ. ಮದುವೆಯ ತನಕ ಅಪ್ಪನ ಮನೆ, ಮದುವೆಯಾದ ನಂತರ ಗಂಡ ದುಡಿದು ಸಾಕುತ್ತಾನೆ ಅಂತ ಅಂದುಕೊಂಡಿರುತ್ತಾರೆ. 


ತಾವೇ ದುಡಿಯಬೇಕು ಅಂದುಕೊಳ್ಳುವ ಹೆಣ್ಣುಮಕ್ಕಳು ತೀರಾ ಕಡಿಮೆ. ಅಂಥವರು ಪ್ರೀತಿ-ಪ್ರೇಮದ ಕಡೆ ತಿರುಗಿಯೂ ನೋಡೋಲ್ಲ. ಯಾಕೆಂದರೆ ಅವರಿಗೆ ತಮಗಿಂತಲೂ ಹೆಚ್ಚು ಓದಿದ, ತಮಗಿಂತಲೂ ಹೆಚ್ಚು ಸಂಪಾದಿಸುವ ಹುಡುಗ ಬೇಕಿರುತ್ತಾನೆ. ಅವರಿಗೆ ಕೆಲಸ ಕಾರ್ಯ ಬಿಟ್ಟು ತಮ್ಮ ಹಿಂದೆ ತಿರುಗುವ ಹುಡುಗರನ್ನು ಕಂಡರಾಗೋಲ್ಲ.


ಯಾವುದೇ ಹುಡುಗಿಯಾಗಲೀ ತನ್ನನ್ನು ಒಬ್ಬ ಹುಡುಗ ಪ್ರೀತಿಸುತ್ತಿದ್ದಾನೆಂದರೆ ಅದನ್ನು ನಿರಾಕರಿಸುವಷ್ಟು ದೃಢತೆ ಹೊಂದಿರುವುದಿಲ್ಲ. ಏನಾಗುತ್ತೋ ನೋಡೋಣ ಎನ್ನುವ ಕುತೂಹಲವೂ ಅವರಲ್ಲಿ ಇರುತ್ತದಲ್ಲ. ಜೊತೆಗೆ ಹುಡುಗರು ಕೊಡುವ ಗಿಫ್ಟ್ ಗಳು, ವೀಕೆಂಡ್ ಸುತ್ತಾಟಗಳು, ಹೋಟೆಲ್-ಮಾಲ್ ಗಳಲ್ಲಿ ಊಟ, ತನ್ನನ್ನು ಆ ಹುಡುಗ ಓಲೈಸುವ ಪರಿ ಎಲ್ಲದಕ್ಕೂ ಹುಡುಗಿ ಫಿದಾ ಆಗಿ ಬಿಡುತ್ತಾಳೆ. 


ಆದರೆ ಅವನಿಲ್ಲದೇ ಬಾಳೋಲ್ಲ ಎನ್ನುವಷ್ಟು ಅವನನ್ನು ಹಚ್ಚಿಕೊಳ್ಳೋಲ್ಲ ಆಕೆ. ಏಕೆಂದರೆ ಅವಳಿಗೆ ಗೊತ್ತಿರುತ್ತದೆ ಮನೆಯಲ್ಲಿನ ಪರಿಸ್ಥಿತಿಯೇ ಬೇರೆ, ಮನೆಯವರು ಎಂದಿಗೂ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಾರರು ಅಂತ. ಗೊತ್ತಿದ್ದೂ ಸಹ ಆತನನ್ನು ನಿರಾಕರಿಸಲಾರಳು ಆಕೆ. ಪ್ರೀತಿಯ ಮಾಯೆಯೇ ಅಂಥಾದ್ದು. 


ಹಾಗಂತ ಆತನಿಗೆ ಹೇಳಲಾರಳು. ತಟಸ್ಥವಾಗಿದ್ದು ಬಿಡುತ್ತಾಳೆ. ಇತ್ತ ಇವಳು ಹಾರಿ ಹೋಗುತ್ತಾಳೆ ಎಂದು ಅರಿವಿರದ ಹುಡುಗ ಮನಸ್ಸಿನೊಳಗೇ ಆಕೆಯನ್ನು ಮದುವೆಯಾಗುವ ಕನಸು ಕಟ್ಟುತ್ತಿರುತ್ತಾನೆ.  

ಇನ್ನು ಮನೆಯಲ್ಲಿ ಅವಳಿಗಾಗಿ ನೋಡುವ ಗಂಡುಗಳೋ ಸಾಫ್ಟ್ ವೇರ್ ಇಂಜನಿಯರುಗಳೋ ಅಥವಾ ಫಾರಿನ್ನಿನವರೋ ಆಗಿರುತ್ತಾರೆ. ಅವರು ನೋಡಲು ಹೇಗೇ ಇದ್ದರೂ ಅವರ ಜೊತೆಗಿನ ವಿವರ ಬಹಳ ಆಕರ್ಷಣೀಯವಾಗಿರುತ್ತದೆ. ವರ್ಷದ ಸಂಬಳದ ಪ್ಯಾಕೇಜು, ಆಸ್ತಿ ವಿವರಗಳು, ಐಷಾರಾಮಿ ವಸ್ತುಗಳಾದ ಕಾರು ಮುಂತಾದವು... 


ಇವೆಲ್ಲದರ ಮುಂದೆ ತನಗಾಗಿ ಗಂಟೆಗಟ್ಟಲೆ ಕಾಯುತ್ತಾ ನಿಲ್ಲುವ ಹುಡುಗ ಸಪ್ಪೆ ಎನ್ನಿಸಿಬಿಡುತ್ತಾನೆ ಆಕೆಗೆ. ಇವನು ನನ್ನ ಹಿಂದೆ ಅಲೆಯುವ ಬದಲು ಒಂದು ಕಷ್ಟಪಟ್ಟು ಒಂದು ಕೆಲಸ ಹಿಡಿಯಬಾರದಾ ಅನ್ನಿಸುತ್ತದೆ. ಪ್ರೀತಿಸುವ ಹುಡುಗನನ್ನು ಮದುವೆಯಾದರೆ ಏನು ಸಿಗುತ್ತದೆ, 


ಈಗಿರುವ ಹಾಗೆಯೇ ಮಿಡಲ್ ಕ್ಲಾಸ್ ಲೈಫ್.... 


ಅದೇ ಈ ಹುಡುಗನನ್ನು ಮದುವೆಯಾದರೆ ಫಾರಿನ್ ಟೂರ್ ಮಾಡುತ್ತಾ ಮಜವಾಗಿರಬಹುದು ಎಂದುಕೊಳ್ಳುವಾಗ ಬಸ್ ಚಾರ್ಜಿಗೂ ಪರದಾಡುವ ತನ್ನ ಹುಡುಗ ಯಾಕೋ ಬೇಡವೆನ್ನಿಸುತ್ತಾನೆ.


ಇವನಾದರೆ ಜೀವನದಲ್ಲಿ ಆಗಲೇ ಸೆಟ್ಲ್ ಆಗಿದ್ದಾನೆ. ತನ್ನ ಹುಡುಗನೋ ಜೀವನವನ್ನು ಇನ್ನೂ ಸೀರಿಯಸ್ಸಾಗಿ ತೆಗೆದುಕೊಂಡೇ ಇಲ್ಲ. ಅದರಲ್ಲಿಯೂ ತಾನು ಅವನನ್ನು ಮದುವೆಯಾದರೆ ಮನೆಯರನ್ನು ಎದುರು ಹಾಕಿಕೊಳ್ಳಬೇಕು. 


ಮದುವೆಯ ನಂತರ ಇವರು ಯಾರೂ ತಮಗೆ ಸಹಾಯ ಮಾಡೋಲ್ಲ. ಮುಂದೆ ಮಗುವಾದ ಮೇಲೆ ಅದನ್ನು ಬೆಳೆಸುವ ಪೂರ್ಣ ಜವಾಬ್ದಾರಿ ಕೇವಲ ನಮ್ಮಿಬ್ಬರದ್ದೇ ಆಗುತ್ತದೆ. ಅದೇ ಈ ಹುಡುಗನನ್ನು ಮದುವೆಯಾದರೆ ತನ್ನ ಬಾಣಂತನ ಸಹ ತವರಿನವರೇ ಮಾಡುತ್ತಾರೆ. 


ನಾಳೆಯ ದಿನ ತನ್ನ ಬದುಕಿನಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಸಹಾಯಕ್ಕೆ ಅಣ್ಣ-ತಮ್ಮಂದಿರು ಬರುತ್ತಾರೆ. ಪ್ರೀತಿಸಿ ಮದುವೆಯಾದರೂ ಸಹ ಆ ಪ್ರೀತಿ ಎಷ್ಟು ದಿನ ಉಳಿಯುತ್ತದೆ? ಬದುಕಲು ಪ್ರೀತಿಯಲ್ಲ ಹಣ ಬೇಕು, ಸಾಮಾಜಿಕ ಸ್ಥಾನಮಾನ ಬೇಕು. ಇದನ್ನೆಲ್ಲಾ ಗಳಿಸಲು ತನ್ನ ಹುಡುಗನಿಗೆ ಕಡಿಮೆ ಎಂದರೂ ಹತ್ತು ವರ್ಷ ಬೇಕು. 


ಅಲ್ಲಿಯವರೆಗೂ ಕಾಯಲು ತನ್ನಿಂದಾಗುವುದಾ? 


ತಾನು ಕಾಯಲು ಮನೆಯವರು ಬಿಡುತ್ತಾರಾ? ಅಸಲಿಗೆ ಮದುವೆಯ ಬಗ್ಗೆ ತನ್ನನ್ನೇನೂ ಕೇಳುವುದೇ ಇಲ್ಲ ಅವರು. ತನಗೆ ಸೂಕ್ತವಾದ ಗಂಡನ್ನು ತಾವೇ ಹುಡುಕಿ ಮದುವೆ ಮಾಡುತ್ತಾರೆ. ತನ್ನ ಕೆಲಸ ತಾಳಿ ಕಟ್ಟಿಸಿಕೊಳ್ಳುವುದೊಂದೇ ಎಂದೆಲ್ಲಾ ಮೊದಲೇ ಯೋಚಿಸುವ ಹುಡುಗಿ ತನ್ನ ಪ್ರೀತಿಯನ್ನು ಸೀರಿಯಸ್ಸಾಗಿ ತೆಗೆದುಕೊಂಡು ಇರುವುದೇ ಇಲ್ಲ. ಹಾಗಾಗಿ ಸುಲಭವಾಗಿ ತನ್ನ ಪ್ರೀತಿಯಿಂದಾಚೆ ಬಂದು ಮದುವೆಯಾಗಿ ಸುಖವಾಗಿರುತ್ತಾಳೆ.



ಆದರೆ ಹುಡುಗರಿಗೆ ತಾನಿಷ್ಟಪಡುವ ಹುಡುಗಿಯನ್ನು ತನ್ನನ್ನಿಷ್ಟ ಪಡುವಂತೆ ಮಾಡುವುದರಲ್ಲಿಯೇ ಸಾರ್ಥಕ್ಯ ಕಾಣುತ್ತದೆ ಹೊರತು ಹುಡುಗಿ ಇಷ್ಟೆಲ್ಲಾ ಯೋಚನೆ ಮಾಡಿರುತ್ತಾಳೆ ಅಂತ ತಿಳಿಯುವುದಿಲ್ಲ. ಮನೆಯಲ್ಲಿ ಒಳ್ಳೆಯ ಸಂಬಂಧ ಬಂದಾಗ ಹುಡುಗಿ ತನ್ನ ಜೀವನವನ್ನು ಭದ್ರ ಮಾಡಿಕೊಳ್ಳುತ್ತಾಳೆ. 


ಹುಡುಗರು ಅವಳನ್ನು ಬೈಯುತ್ತಾ ಅಡ್ಡಾಡುತ್ತಾರೆ. ಅದರ ಬದಲು ತಾವು ಸಾಧಿಸಿ ಹುಡುಗಿಯರು ತಮ್ಮ ಹಿಂದೆ ಬೀಳುವಂತೆ ಮಾಡಬೇಕಿದೆಯಲ್ಲವೇ?

**********

ಕೆ.ಎ.ಸೌಮ್ಯ
ಮೈಸೂರು
Published in vivah on 24.04.2019