ಹೆಸರಿಗೊಂದು ಮದುವೆ



ಆಗಿನಿಂದಲೂ ನೋಡುತ್ತಲೇ ಇದ್ದಳವಳು. ಮನೆಮಂದಿಯೆಲ್ಲಾ ಮಡಿಯುಟ್ಟು, ಹೊಸ ಬಟ್ಟೆ ಧರಿಸಿ ನಲಿಯುತ್ತಿದ್ದರು. ಆದರೆ ಇವಳ ಕಡೆ ಗಮನ ಕೊಡುವವರು ಯಾರೂ ಇರಲಿಲ್ಲ. ಇವಳ ಬೇಕು ಬೇಡಗಳನ್ನು ನೋಡುವವರು ಯಾರೂ ಇರದೇ ಅವಳ ಮನಸ್ಸಿಗೆ ಬಹಳ ಕಷ್ಟವಾಗುತ್ತಿತ್ತು. 


ಒಂದೆರೆಡು ಬಾರಿ ತನ್ನದೇ ಮಕ್ಕಳನ್ನು ಕರೆದಳು. ಅವು ಅಲ್ಲೇ ಅಡ್ಡಾಡುತ್ತಿದ್ದರೂ ಸಹ ಅವಳ ಧ್ವನಿ ಕಿವಿಗೇ ಬಿದ್ದಿಲ್ಲ ಎನ್ನುವಂತೆ ವರ್ತಿಸುತ್ತಿದ್ದವು. ಮನೆಮಂದಿಯಿಂದ ಇಷ್ಟೊಂದು ನಿರ್ಲಕ್ಷ್ಯ ಸಹಿಸುತ್ತಿರುವ ಈಕೆ ತೀರಾ ವಯಸ್ಸಾದವಳೇನೂ ಅಲ್ಲ. 


ಈ ಮನೆಯ ಹಿರಿಯ ಸೊಸೆ ಈಕೆ. 


ಪೊಲಿಯೋ ಅಟ್ಯಾಕಿನಿಂದಾಗಿ ಈಕೆಯ ಒಂದು ಕಾಲು ಪೂರ್ತಿಯಾಗಿ ಬಲಹೀನವಾಗಿದೆ.‌ ದೇಹದ ಭಾರವನ್ನು ತಡೆದುಕೊಳ್ಳುವಷ್ಟು ಶಕ್ತಿ‌ ಇಲ್ಲ ಅವಳ ಕಾಲುಗಳಲ್ಲಿ. ಚಿಕ್ಕವಯಸ್ಸಿನಿಂದ ಊರುಗೋಲು ಅಭ್ಯಾಸವಾಗಿರುವುದರಿಂದ ನಡೆದಾಡಲು ತೊಂದರೆಯಿಲ್ಲ. 


ಆದರೆ ನಿಜವಾದ ತೊಂದರೆ ಆಗುತ್ತಿರುವುದು ಅವಳನ್ನೂ ಮನುಷ್ಯಳು ಅಂತ ಯಾರೂ ಗಮನಿಸದೇ ಇದ್ದಾಗ. ಅವಳೂ ಮನೆಯಲ್ಲಿದ್ದಾಳೆ ಎನ್ನುವುದನ್ನೇ ಮರೆತಂತೆ ಮನೆಯ ಜನರು ತಮ್ಮ ಪಾಡಿಗೆ ತಾವು ಸಂಭ್ರಮದಲ್ಲಿ ಮುಳುಗಿದ್ದರು.

 

ಚಿಕ್ಕ ವಯಸ್ಸಿನಲ್ಲಿ ಅವಳು ಎಲ್ಲರಂತೆ ಸ್ಕೂಲಿಗೆ ಹೋಗುತ್ತಿದ್ದಳುಓದುತ್ತಿದ್ದಳುಬರೆಯುತ್ತಿದ್ದಳುಖುಷಿಯಾಗಿಯೇ ಇದ್ದಳು. ಆದರೆ ಅವಳಿಗೆ ಮೊದಲ ಆಘಾತ ಎದುರಾದದ್ದು ಅವಳ ಮದುವೆ ಮಾಡಬೇಕು ಎಂದು ಮನೆಯವರು ತೀರ್ಮಾನಿಸಿದಾಗ. 


ಅಲ್ಲಿಯವರೆಗೂ ಹಿನ್ನೆಲೆಯಲ್ಲಿದ್ದ ಆಕೆಯ ಸೊಟ್ಟ ಕಾಲುಗಳೇ ಈಗ ಮದುವೆಗೆ ಅಡ್ಡಿಯಾಗತೊಡಗಿತು. ಸಾಧನೆ ಮಾಡಲು ರೂಪ ಬೇಡ ನಿಜ. ಆದರೆ ಮದುವೆಯ ವಿಷಯದಲ್ಲಿ ರೂಪವೇ ಮೊದಲ ಪ್ರಾಶಸ್ತ್ಯ ಪಡೆಯುವುದು ಕಹಿಯಾದ ಸತ್ಯ. 


ಇವಳನ್ನು ನೋಡಲು ಬರುತ್ತಿದ್ದ ಗಂಡುಗಳು ಮೊದಲ ನೋಟಕ್ಕೆ ಇವಳನ್ನು ತಿರಸ್ಕರಿಸುತ್ತಿದ್ದರು. ಆಗ ಅವರ ಜಿಗುಪ್ಸೆಯ ನೋಟವನ್ನು ಸಹಿಸಲಾಗದೇ ಅವಳ ಮನಸ್ಸು ವಿಲವಿಲನೆ ನರಳುತ್ತಿತ್ತು. ಗಂಡು ಬರುತ್ತಿದೆ ಎಂದು ಗೊತ್ತಾದೊಡನೆಯೇ ಅವಳಿಗೆ ಜ್ವರ ಬಂದಂತಾಗುತ್ತಿತ್ತು. ನೋಡಲು ಬರುವ ಗಂಡಿನ ಕಣ್ಣಿನಲ್ಲಿ ತನ್ನ ಬಗೆಗಿನ ನೈಜ ಭಾವನೆಯನ್ನು ಕಂಡು ಕಂಡು ಅವಳಿಗೆ ಮದುವೆಯೇ ಬೇಡ ಎನಿಸುತ್ತಿತ್ತು.

 

ಆದರೆ ಅವಳ ಮನೆಯವರಿಗೆ ಅವಳ ಮದುವೆಯದೊಂದೇ ಚಿಂತೆಯಾಗಿತ್ತು. ಹೇಗಾದರೂ ಮಾಡಿ‌ ಇವಳನ್ನು ಮದುವೆ ಮಾಡಿ ಸಾಗಿ ಹಾಕುವುದೊಂದೇ ಗುರಿ ಎನ್ನುವಂತೆ ವರ್ತಿಸುತ್ತಿದ್ದರು. ಗಂಡಿನ ಕಡೆಯವರು ಕೇಳಿದಷ್ಟು ವರದಕ್ಷಿಣೆ ಕೊಟ್ಟುಅದ್ಧೂರಿಯಾಗಿ ಮದುವೆ ಮಾಡಿಕೊಡಲು ಸಿದ್ಧರಿದ್ದರು. 


ಆದರೆ ಇಷ್ಟೇ ಪ್ರಾಮುಖ್ಯತೆಯನ್ನು ಅವಳ ಓದಿಗೆ ನೀಡಿದ್ದರೆ ಇಂದು ಅವಳು ತನ್ನ ಕಾಲಿನ ಮೇಲೆ ತಾನೇ ನಿಂತು ತನ್ನ ಬದುಕು ಕಟ್ಟಿಕೊಳ್ಳುತ್ತಿದ್ದಳು. ಮದುವೆಯ ಉದ್ದೇಶವೂ ಅದೇ ತಾನೇಹೆಣ್ಣಿಗೆ ಒಂದು ಶಾಶ್ವತ ಆಸರೆ ಎಂದರೆ ಮದುವೆ. ಗಂಡನಾದವನು ಅವಳಿಗೆ ಕೊನೆವರೆಗೂ ಅನ್ನ ಹಾಕುತ್ತಾನೆ ಎಂಬ ನಂಬಿಕೆಯಿಂದ ಹೆಣ್ಣು ಹೆತ್ತವರು ಅವಳನ್ನು ಮದುವೆ ಮಾಡಿ ಕಳಿಸುತ್ತಾರೆ. ಅದಕ್ಕಾಗಿ ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಮದುವೆ ಮಾಡುತ್ತಾರೆ. 


ಆದರೆ ಮದುವೆ ಮಾಡಿಬಿಟ್ಟರೆ ಅಷ್ಟೇ ಸಾಕೇದುಡ್ಡಿನಾಸೆಗೋ ಮತ್ತೊಂದಕ್ಕೋ ಮದುವೆಯಾದವರು ತಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಯೋ ಇಲ್ಲವೋ ಅಂತ ಮದುವೆಯ ನಂತರ ಪರೀಕ್ಷಿಸುತ್ತಾರೆಯೇ


ಖಂಡಿತಾ ಇಲ್ಲಮದುವೆ ಮಾಡಿ ಮುಗಿಸಿದ ನಂತರ ತಮ್ಮ ಜವಾಬ್ದಾರಿ ಕಳೆದುಕೊಂಡು ನಿರಾಳರಾಗುತ್ತಾರೆಮುಂದಿನದನ್ನು ಕಷ್ಟವೋ ಸುಖವೋ ಆಕೆಯೊಬ್ಬಳೇ ಅನುಭವಿಸಬೇಕು.

 

ಈಗ ಇವಳ ಜೊತೆಗೆ ನಡೆಯುತ್ತಿರುವುದೂ ಅದೇ...

 

ಹೆಣ್ಣಿನ ಮನೆಯವರು ಕೊಡುವ ವರದಕ್ಷಿಣೆ-ವರೋಪಚಾರಕ್ಕೆ ಮರುಳಾಗಿ ಈಕೆಯನ್ನು ತಮ್ಮ ಮನೆಗೆ ಸೊಸೆಯಾಗಿ ತಂದುಕೊಂಡರು ಇವಳ ಅತ್ತೆ ಮನೆಯವರುಆದರೆ ಕೊಟ್ಟ ದುಡ್ಡು ಕರಗುತ್ತಿದ್ದಂತೆ ಇವಳ ಮೇಲಿನ ನಿರ್ಲಕ್ಷ್ಯ ಶುರುವಾಗಿತ್ತು. 


ಇವಳ ಗಂಡನಿಗೆ ಸಮಯ ಕಳೆಯುತ್ತಿದ್ದಂತೆ ಪಶ್ಚಾತ್ತಾಪವಾಗತೊಗಿತು. ಕಾಲಿಲ್ಲದ ಹೆಂಡತಿಯನ್ನು ಎಲ್ಲಿಗೂ ಕರೆದೊಯ್ಯುವಂತಿಲ್ಲ. 


ಒಂದೊಮ್ಮೆ ಕರೆದೊಯ್ದರೂ ಎಲ್ಲರೂ ತನ್ನನ್ನು ಅನುಕಂಪದಿಂದ ನೋಡುವುದು ಅವನಿಗೆ ಸಹಿಸಲಾಗುತ್ತಿರಲಿಲ್ಲ. ತೀರಾ ಹತ್ತಿರದವರ ಮನೆಯ ಫಂಕ್ಷನ್ನುಗಳಿಗೆ ಅನಿವಾರ್ಯವಾಗಿ ಹೋಗಲೇಬೇಕಾದಾಗ ಎಲ್ಲರೂ ಅವನ ಹೆಂಡತಿಯ ವ್ಯಕ್ತಿತ್ವ ಗಮನಿಸದೇ ಕೇವಲ ದೈಹಿಕ ನ್ಯೂನ್ಯತೆಯನ್ನು ಮಾತ್ರ ಗಮನಿಸುತ್ತಿದ್ದರು. 


ತಮ್ಮ ತಮ್ಮಲ್ಲೇ ಪಿಸಿಪಿಸಿ ಅಂತ ಮಾತನಾಡಿಕೊಳ್ಳುತ್ತಿದ್ದರು. ಗಂಡ-ಹೆಂಡತಿ ಇಬ್ಬರೂ ಮುಜುಗರದಿಂದಲೇ ಕಾರ್ಯಕ್ರಮ ಮುಗಿಸಿ ಬರುವಂತಾಗುತ್ತಿತ್ತು. ಹಾಗಾಗಿ ಈಗ ಅವಳನ್ನು ಹೊರಗೆಲ್ಲೂ ಕರೆದೊಯ್ಯುತ್ತಿರಲಿಲ್ಲ. ಮನೆಯಲ್ಲಿಯೇ ಖೈದಿಯಂತಾಗಿದ್ದಳು ಆಕೆ.

 

ಚಿಕ್ಕ ವಯಸ್ಸಿನಿಂದಲೂ ದೊಡ್ಡ ಅಧಿಕಾರಿಯಾಗುವ ಕನಸು ಕಾಣುತ್ತಿದ್ದಳು ಅವಳುಎಲ್ಲರಿಂದ ಗೌರವ ಪಡೆಯುವ ವೃತ್ತಿ ಜೀವನ ನಡೆಸುವುದು ಅವಳ ಗುರಿಯಾಗಿತ್ತು


ಆದರೆ ಈ ಮದುವೆ ಅವಳ ಎಲ್ಲಾ ಕನಸುಗಳನ್ನೂ ಮಣ್ಣುಗೂಡಿಸಿತ್ತುಹೊರನೋಟಕ್ಕೆ ಆಕೆಯ ದೇಹ ಮಾತ್ರ ವಿಕಲವಾಗಿತ್ತುಆದರೆ ಮನಸ್ಸಿನಲ್ಲಿ ಬಹಳಷ್ಟು ಸಾಧಿಸುವ ಹುಮ್ಮಸ್ಸಿತ್ತು

ಆದರೆ ದುರಾದೃಷ್ಟವಶಾತ್ ಅವಳನ್ನು ಮದುವೆ ಮಾಡಿಕೊಂಡಿರುವುದೇ ಆಕೆಯ ಪುಣ್ಯ ಎಂಬಂತೆ ಎಲ್ಲರೂ ವರ್ತಿಸುತ್ತಿದ್ದರೇ ಹೊರತು ಆಕೆಯ ಸಾಧನೆಯ ಬಗ್ಗೆ ಯಾರೂ ಯೋಚಿಸುತ್ತಲೂ ಇರಲಿಲ್ಲ


ಅವಳೇನು ತಾನೇ ಮಾಡಬಲ್ಲಳು ಎಂಬ ದಿವ್ಯ ನಿರ್ಲಕ್ಷ ಅವರದ್ದುಅವಳು ಮಾತ್ರ ಇಂದಿಗೂ ಕೆಪಿಎಸ್ಸಿ ಪರೀಕ್ಷೆ ಬರೆದು ದೊಡ್ಡ ಆಫೀಸರಾಗುವ ಕನಸು ಕಾಣುತ್ತಲೇ ಇದ್ದಳುಆದರೆ ಯಾರೂ ಅವಳೊಂದಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಿರಲಿಲ್ಲವಾದ್ದರಿಂದ  ಈ ಕನಸು ಯಾರಿಗೂ ಗೊತ್ತಾಗದೇ ಇಂದಿಗೂ ಗುಪ್ತವಾಗಿಯೇ ಉಳಿದಿದೆ.


-ಕೆ.ಎ. ಸೌಮ್ಯ

ಮೈಸೂರು


*******************************

Published in Vishwavani on 05.12.2018