ಆದರ್ಶ ರಾಮನೋ ರಾವಣನೋ..
ಹೆಣ್ಣುಮಕ್ಕಳು ಜಾಸ್ತಿ ನಗಬಾರದು,
ಚೆಲ್ಲುಚೆಲ್ಲಾಗಿ ಆಡಬಾರದು, ಮೈ ಮೇಲೆ ಗಮನ ಇರಬೇಕು, ಸ್ವಲ್ಪ ಲಂಗ ಮೇಲೇರಿದ್ದರೂ ಅಮ್ಮ ಬೈದು
ಲಂಗ ಸರಿ ಮಾಡ್ತಾಳೆ ಅಥವಾ ಸರಿ ಮಾಡಿಕೋ ಅಂತ ರೇಗ್ತಾಳೆ. ಆದರೆ ಅದೇ ಅಮ್ಮ ಗಂಡು ಮಕ್ಕಳಿಗೆ ಏನು
ಪಾಠ ಹೇಳಿಕೊಟ್ಟಿರ್ತಾಳೆ?
ಒಂದು ಹುಡುಗಿಯ ಅತ್ಯಾಚಾರವಾದರೆ ಜನ ತಲೆಗೊಂದರ ಹಾಗೆ ಮಾತನಾಡ್ತಾರೆ. ಹುಡುಗಿ ಸರಿ
ಇರಲಿಲ್ವಂತೆ ಅನ್ನೋದ್ರಿಂದ ಹಿಡಿದು ಅವಳ ಡ್ರೆಸ್ ಬಗ್ಗೆ, ಅವಳ್ಯಾಕೆ ಅಲ್ಲಿಗೆ ಹೋಗಬೇಕಿತ್ತು,
ಅಷ್ಟು ಹೊತ್ತಲ್ಲಿ ಅವಳಿಗೆ ಅಲ್ಲೇನು ಕೆಲಸ ಅಂತೆಲ್ಲಾ ಹೇಳಿ ದೋಷವನ್ನು ಅವಳ ತಲೆಗೆ ಕಟ್ಟಲು
ಹವಣಿಸುತ್ತಾರೆ.
ಅತ್ಯಾಚಾರ ಮಾಡಿದ ಹುಡುಗನ ಮನಸ್ಥಿತಿಯ ಬಗ್ಗೆ ಯಾರೂ ಇದುವರೆಗೂ ಒಂದೂ ಮಾತನಾಡಿಲ್ಲ.
ಇವನ್ಯಾಕೆ ಒಂದು ಹುಡುಗಿಯನ್ನ ನೋಡಿದಾಗ ಅವಳನ್ನು ಅತ್ಯಾಚಾರ ಮಾಡಬೇಕು ಅಂತ
ಅನ್ನಿಸಬೇಕು? ಅಸಹಾಯಕ ಪರಿಸ್ಥಿತಿಯಲ್ಲಿರುವ ಹೆಣ್ಣುಮಕ್ಕಳನ್ನು ನೋಡಿದಾಗ ಇವರಿಗ್ಯಾಕೆ ಅದರ ಲಾಭ
ಪಡೆಯಬೇಕು ಅಂತ ಅನ್ನಿಸಬೇಕು?
ಇದಕ್ಕೆ ಇಂಟರ್ನೆಟ್ ಅನ್ನು ದೂರಲಾಗುತ್ತದೆ.
ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದು ಎರಡೂ ಇರುತ್ತದೆ. ನಮಗೆ ಯಾವುದು ಬೇಕೋ ಅದನ್ನು
ಆಯ್ದುಕೊಳ್ಳುವುದು ನಮ್ಮ ಕೈಲಿದೆ, ಅದನ್ನು ಬಿಟ್ಟು ಅಪರಾಧ ನಡೆದಾಗ ಯಾರು ಇದಕ್ಕೆ ಅದು ಕಾರಣ, ಇದು
ಕಾರಣ, ಕೊನೆಗೆ ಹುಡುಗಿಯೇ ಕಾರಣ ಅಂತಾರೋ ಅವರು ನಿಜಕ್ಕೂ ಅಪರಾಧಿಗಳೇ.
ಇವತ್ತು ಅತ್ಯಾಚಾರವನ್ನು ಎಷ್ಟು ಕ್ಷುಲ್ಲಕವಾಗಿ ನೋಡಲಾಗ್ತಾ ಇದೆ ಅಂದ್ರೆ
ಆಘಾತವಾಗುತ್ತದೆ. ಒಂದು ಹುಡುಗಿಯ ಇಷ್ಟಕ್ಕೆ ವಿರುದ್ಧವಾಗಿ ನಡೆಯುವ ಕ್ರಿಯೆ ಇದಾಗಿದೆ. ಆದರೆ
ಇಷ್ಟವಿಲ್ಲದ್ದನ್ನು ತಿನ್ನುವಾಗ, ಇಷ್ಟವಿಲ್ಲದ ಕೆಲಸ ಮಾಡುವಾಗ ಅನುಭವಿಸುವ ನೋವಿಗಿಂತಾ ಸಾವಿರ
ಪಾಲು ಹೆಚ್ಚಿನ ಮಾನಸಿಕ ನೋವನ್ನು ಹೆಣ್ಣು ಅನುಭವಿಸುತ್ತಾಳೆ.
ಹೇಗೆ ಗೊತ್ತೇ?
ಚಿಕ್ಕಂದಿನಿಂದಲೂ ನಮಗೆ ಸೀತೆ-ಸಾವಿತ್ರಿಯರ ಆದರ್ಶ ಹೇಳಿ ಕೊಟ್ಟು ಬೆಳೆಸಲಾಗಿರುತ್ತದೆ. ಪತಿಯೇ ಪರದೈವ, ಅವನ ಸೇವೆಯೇ ಪರಮಧರ್ಮ ಅಂತ ಬೋಧಿಸಲಾಗಿರುತ್ತದೆ. ಪರ ಪುರುಷನನ್ನು ನೋಡುವುದೂ ಮಹಾಪಾಪ ಎಂಬಂತೆ ಬೆಳೆಸಲಾಗುತ್ತದೆ.
ಇದನ್ನೂ ಮೀರಿ ಬಾಯ್ ಫ್ರೆಂಡ್ಗಳನ್ನು ಪಡೆದ ಹೆಣ್ಣುಮಕ್ಕಳನನ್ನು ಬಜಾರಿಯರು ಎಂಬಂತೆ ಸಮಾಜ ನೋಡುವಾಗ ಇಂದಿಗೂ ಪಾತಿರ್ವತ್ಯದ ಕಲ್ಪನೆಯೇ ಜನರ ಮನಸ್ಸಿನಲ್ಲಿದೆ ಎಂದು ಗೊತ್ತಾಗುತ್ತದೆ. ಅಂದರೆ ಪುರುಷ ಎಷ್ಟು ಜನ ಮಹಿಳೆಯರನ್ನು ಬೇಕಾದರೂ ಹೊಂದಬಹುದು, ಆದರೆ ಮಹಿಳೆ ಮಾತ್ರ ಒಬ್ಬನೇ ಪುರುಷನಿಗೆ ಮೀಸಲು ಅನ್ನುವ ಭಾವ.
ಅಂದಮೇಲೆ ಯಾರೋ ಅಪರಿಚಿತ ಬಂದು ತನ್ನ ಮೇಲೆ ಅತ್ಯಾಚಾರ ಮಾಡುವಾಗ ಅವನ ಜೊತೆ ಅವನ
ಸ್ನೇಹಿತರೂ ಸೇರಿಕೊಂಡಾಗ ಆ ಹೆಣ್ಣಿನ ಮನಸ್ಸಿನಲ್ಲಿ
ಎಂತಹಾ ನೋವಾಗಿರಬಹುದೆಂದು ಊಹಿಸಲಾದರೂ ಸಾಧ್ಯವೇ? ತನ್ನ ದೇಹದ ಖಾಸಗೀ ಅಂಗಗಳ ಜೊತೆ ಯಾರೋ ಇಷ್ಟ
ಬಂದಂತೆ ಆಟವಾಡಿ ಹಿಂಸಿಸಿದ ನೋವಿನ ಜೊತೆಗೆ ಚಿಕ್ಕಂದಿನಿಂದ ಕಲಿತ ಆದರ್ಶಗಳ ಹರಣ!!
ಹಾಗಾದರೆ...
ಹೆಣ್ಣುಮಕ್ಕಳಿಗೆ ಸೀತೆಯ ಆದರ್ಶ ಹೇಳಿಕೊಟ್ಟು ಗಂಡು ಮಕ್ಕಳಿಗೆ ರಾವಣನ ಆದರ್ಶ
ಹೇಳಿಕೊಟ್ಟಿರುತ್ತಾರೆಯೇ?
ಹೆಣ್ಣು ತಗ್ಗಿ ಬಗ್ಗಿ ನಡೆಯಬೇಕು, ಧ್ವನಿ ಎತ್ತಬಾರದು, ಒಬ್ಬಳೇ ಓಡಾಡಬಾರದು ಎಂಬ ಬಿಗಿ
ಬಂಧನದ ನಡುವೆಯೂ ಇಂತಹಾ ಅತ್ಯಾಚಾರಗಳು ನಡೆದಾಗ ಅದಕ್ಕೂ ಹೆಣ್ಣನ್ನೇ ಗುರಿಮಾಡಲಾಗುತ್ತದೆ.
ಹೆಣ್ಣು ಮಕ್ಕಳು ಬಯಸಿ ಬಯಸಿ ಅದನ್ನು ಪಡೆಯುತ್ತಾರೆಯೇ? ಇಷ್ಟಕ್ಕೂ ಅವಳ ನೋವು ಚೀರಾಟದ ನಡುವೆ
ಪುರುಷ ನಿಜಕ್ಕೂ ಪಡೆಯುವುದೇನು?
ಅತ್ಯಾಚಾರಕ್ಕೊಳಗಾದವಳು ಯಾವ ತಪ್ಪು ಮಾಡಿರದಿದ್ದರೂ ತನ್ನ ಮನೆಯಲ್ಲಿ, ಸಮಾಜದಲ್ಲಿ ಅಸ್ಪೃಶ್ಯಳಂತೆ ಬದುಕಬೇಕು. ತನ್ನೆಲ್ಲಾ ಆಸೆ
ಕನಸುಗಳನ್ನು ಮೂಟೆ ಕಟ್ಟಿ ಎಸೆಯಬೇಕು. ಮಾಧ್ಯಮದಲ್ಲಿ ತನ್ನ ಬಗ್ಗೆ ಆಗ್ತಾ ಇರೋ ಚರ್ಚೆಯನ್ನ ನೋಡಿ
ಕಣ್ಣೀರು ಸುರಿಸಬೇಕು.
ಆದರೆ ಅದೇ ಪುರುಷ ಅವಳೆದುರು ರಾಜಾರೋಷವಾಗಿ ಓಡಾಡಿಕೊಂಡಿರುತ್ತಾನೆ. ಅವನಿಗೆ ಬೆಂಬಲವಾಗಿ
ಅವನ ಮನೆಯವರೂ ಇರುತ್ತಾರೆ. ಅವರು ಅವನಿಗೆ ನೀನು ಮಾಡಿದ್ದು ತಪ್ಪು ಅಂತ ಹೇಳದೇ ಸಧ್ಯ ಮಗ ಜೈಲಿಗೆ
ಹೋಗಲಿಲ್ಲವಲ್ಲ ಅಂತ ಸಮಾಧಾನ ಮಾಡಿಕೊಳ್ತಾರೆ. ಅತ್ಯಾಚಾರಕ್ಕೆ ಆ ಹುಡುಗಿಯೇ ಕಾರಣ ಅಂತ
ದೂರ್ತಾರೆ. ನಂತರ ಅವನು ಬೇರೆ ಹುಡುಗಿಯನ್ನು ಮದುವೆಯೂ ಆಗ್ತಾನೆ, ಸುಖವಾಗಿಯೂ ಇರ್ತಾನೆ.
ಎಲ್ಲಾ ಕ್ರಿಯೆಗಳಂತೆ ಲೈಂಗಿಕ ಕ್ರಿಯೆಯೂ ಒಂದು ಕ್ರಿಯೆಯಾಗಿದೆ. ಆದರೆ ಅದನ್ನು ಬಲವಂತವಾಗಿ ಪಡೆಯಬಾರದು ಅಂತ ಯಾರಿಗೂ, ಯಾವ ವಿದ್ಯಾಭ್ಯಾಸದ ಹಂತದಲ್ಲಿಯೂ ಹೇಳಿಕೊಡುವುದಿಲ್ಲ. ಬಲವಂತವಾಗಿ ಪಡೆಯುವುದೆಂದರೆ ಬೇಡ ಅಂತ ಹೇಳುವ ಹೆಣ್ಣಿನಿಂದ ಒತ್ತಾಯಪೂರ್ವಕವಾಗಿ ಪಡೆಯುವುದು.
ಅಂದರೆ ತಾನು ಹೇಳಿದ ಹಾಗೆ ಅವಳು ಕೇಳಲಿಲ್ಲವೆಂದು ತನ್ನ ಬಲ ಪ್ರಯೋಗಿಸಿ ಅವಳ ದೇಹವನ್ನು ತನ್ನ ವಶ ಮಾಡಿಕೊಳ್ಳುವುದು. ಹೆಣ್ಣು ಕೋಮಲೆ, ಹೆಣ್ಣು ಸುಕುಮಾರಿ ಅಂತೆಲ್ಲಾ ಹೇಳಿ ದೈಹಿಕವಾಗಿ ಅವಳನ್ನು ನಿಶ್ಯಕ್ತಳನ್ನಾಗಿಸಿ ಆ ನಿಶ್ಯಕ್ತ ದೇಹದ ಮೇಲೆ ತನ್ನ ಪೌರುಷ ಪ್ರದರ್ಶನ ಮಾಡುವುದು.
ಒಂದು ವೇಳೆ
ಹೆಣ್ಣಿಗೆ ಗಂಡಿನಷ್ಟೇ ಶಕ್ತಿ ಇದ್ದು, ಅವಳು ಕೊಡುವ ಒಂದು ಏಟಿಗೆ ಅವನು ಅಷ್ಟು ದೂರ ಹಾರಿ ಬೀಳುವ
ಹಾಗೆ ಇದ್ದಿದ್ದರೆ ಈ ಪ್ರಕರಣಗಳು ನಡೆಯುತ್ತಲೇ ಇರಲಿಲ್ಲ.
ಆದರೇನು ಮಾಡೋದು?
ಗಟ್ಟಿಯಾಗಿ ನಗಲೂ ಸ್ವಾತಂತ್ರವಿಲ್ಲದ ನಾವು ಗಂಡಿಗೆ ಪೆಟ್ಟು ಕೊಡುವುದನ್ನು ಹೇಗೆ ತಾನೇ ಅಭ್ಯಾಸ ಮಾಡಬಲ್ಲೆವು? ಹನ್ನೆರೆಡು ವರ್ಷ ವನವಾಸದ ದೀರ್ಘ ಅವಧಿಯಲ್ಲಿ ಪಾಂಡವರು ದ್ರೌಪದಿಗೂ ಶಸ್ತ್ರವಿದ್ಯೆ, ಆತ್ಮರಕ್ಷಣಾ ವಿದ್ಯೆ ಹೇಳಿಕೊಟ್ಟಿದ್ದರೆ, ಸೈಂಧವ ಅವಳನ್ನು ಹೊತ್ತೊಯ್ಯುವಾಗ ತನ್ನ ರಕ್ಷಣೆ ತಾನೇ ಮಾಡಿಕೊಳ್ಳುತ್ತಿದ್ದಳು.
ಆದರೆ ಹೆಣ್ಣಿಗೆ ಗಂಡೇ ರಕ್ಷಣೆ ಮಾಡಬೇಕು ಅನ್ನೋ
ಕಾನೂನು ಮಾಡಿ, ನಂತರ ಆ ಕಾನೂನನ್ನು ಪುರುಷರೇ ಮುರಿದಾಗ, ಉಳಿದವರು ಅವರಿಗೆ ಬುದ್ಧಿ ಹೇಳುವ ಬದಲು
ಪ್ರಕರಣವನ್ನೇ ತಿರುಚಲು ಮುಂದಾಗುತ್ತಾರೆ.
ಗಂಡು ತಪ್ಪು ಮಾಡಿದರೆ ಸಹವಾಸ ದೋಷ, ಹೆಣ್ಣು ತಪ್ಪು ಮಾಡಿದರೆ ಉಡುಪಿನ ದೋ಼ಷ. ಗಂಡು ಅವಳನ್ನು ಅತ್ಯಾಚಾರ ಮಾಡಿದರೂ ಅದಕ್ಕೇ ಅವಳೇ ಕಾರಣ.
ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತಳಾಗುವ ಹೆಣ್ಣಿಗೆ ಹೊಡೆತದ ಮೇಲೆ ಹೊಡೆತ. ಹೆಣ್ಣಿಗೆ ಮಾತ್ರ ಶೀಲ ಇರುವುದು, ಗಂಡಿಗಿಲ್ಲ ಎನ್ನುವ ಕಾಲದಲ್ಲಿ ನಾವು ಅತ್ಯಾಚಾರವನನ್ನು ಪ್ರತಿಭಟಿಸುವುದು ಕೂಡ ಅನ್ಯಾಯ ಆಗಬಹುದು.
ಏಕೆಂದರೆ ಅನಾದಿ
ಕಾಲದಿಂದಲೂ ಪುರುಷರೇ ಸಿದ್ಧಪಡಿಸಿರುವ ಹೆಣ್ಣಿನ ನಡವಳಿಕೆಯ ಪಟ್ಟಿಯಲ್ಲಿ ಪ್ರತಿಭಟನೆ ಎಂಬ
ಅಂಶವಿಲ್ಲ.
ಕೆ.ಎ. ಸೌಮ್ಯ
ಮೈಸೂರು
(published in manasa MAY
2016)

