ನನ್ನ ಹೆಂಡತಿ ಚಂದವಿಲ್ಲ

Published in Vishwavani on 31.10.2018
ಈ ಜಗತ್ತಿನ ಪುರುಷರಿಗೆ ಸದಾ
ಹೊಸ ಹೊಸ ವಿಷಯಗಳ ಮೇಲೆ ವ್ಯಾಮೋಹ ಜಾಸ್ತಿ. ತಮ್ಮ ಕೈಗೆ ಸಿಗದ ವಸ್ತುಗಳ ಮೇಲೆ ಭಯಂಕರ ಕುತೂಹಲ
ಅವರಿಗೆ. ರಾಜ್ಯ ಗೆಲ್ಲುವ ತನಕವಷ್ಟೇ ಅವರ ಹಪಾಹಪಿತನ. ಗೆದ್ದ ಮೇಲೆ ಅವರು ರಾಜ್ಯದ ಕಡೆ ತಿರುಗಿಯೂ
ನೋಡೋಲ್ಲ. ಆಗಲೇ ಮತ್ತೊಂದು ರಾಜ್ಯದ ಮೇಲೆ ಅವರ ಕಣ್ಣು ಬಿದ್ದಿರುತ್ತದೆ. ಹೀಗಿರುವಾಗ ಸದಾ
ಮನೆಯಲ್ಲಿಯೇ ಇರುವ, ಬೇಕೆನ್ನಿಸಿದಾಗ ತನ್ನ ಕೈಗೆಟುಕುವ ಹೆಂಡತಿ ಅವರ
ಕಣ್ಣಿಗೆ ಸುಂದರಿಯಾಗಿ ಕಾಣಲು ಹೇಗೆ ಸಾಧ್ಯ?
ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳು, ಆಫೀಸುಗಳಲ್ಲಿ, ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ, ಬಸ್ ಸ್ಟಾಪುಗಳಲ್ಲಿ ಸಿಗುವ ಹೆಣ್ಣುಮಕ್ಕಳು ಎಷ್ಟು ಅಂದವಾಗಿ ಡ್ರೆಸ್ ಮಾಡಿಕೊಂಡಿರುತ್ತಾರೆ.
ಆದರೆ ತಮ್ಮ ಹೆಂಡತಿಯೋ...
ಮನೆಯಲ್ಲಿ ಸದಾ ಹಳೆಯದೊಂದು ನೈಟಿ ನೇತು ಹಾಕಿಕೊಂಡು, ಕೂದಲು ಬಾಚದೇ ಕೇವಲ ತುರುಬು ಕಟ್ಟಿಕೊಂಡು, ಮುಖವನ್ನೂ ತೊಳೆಯದ ಹಾಗೆ ಜಿಡ್ಡು ಜಿಡ್ಡು ಮುಖದಲ್ಲಿಯೇ ಇರುತ್ತಾಳೆ ಎಂದು ಇವರ ಆರೋಪ. ಎಂದೋ ಒಮ್ಮೆ ಹೊರಹೋಗುವಾಗ ಮಾತ್ರ ಅಚ್ಚುಕಟ್ಟಾಗಿ ತಯಾರಾಗುತ್ತಾಳೆ. ಮನೆಯಲ್ಲಿಯೇ ಇದ್ದರೆ ತನ್ನ ಅಂದದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾಳೆ. "ಅಯ್ಯೋ ನನ್ನ ಹೆಂಡತಿ ಚಂದವಿಲ್ಲ" ಅಂತ ಪುರುಷರ ಅಳಲು.
ಈ ಅಳಲಿಗೆ ಸಾಥ್ ಕೊಡುವುದು ಅವರ
ಹಳೆಯ ಪ್ರೀತಿ...!
ಪುರುಷರು ಸುಲಭವಾಗಿ ಯಾವುದನ್ನೂ
ಮರೆಯಲಾರರು. ಅದರಲ್ಲಿಯೂ ಪ್ರೀತಿ-ಪ್ರೇಮದಂತಹ ವಿಷಯವನ್ನು ಮರೆಯದೇ ಜೀವನವಿಡೀ ನೆನಪಿಸಿಕೊಂಡು
ಕೊರಗುತ್ತಲೇ ಇರುತ್ತಾರೆ. ಎಂದೋ ತಮ್ಮೊಂದಿಗೆ ಕಾಲೇಜಿನಲ್ಲಿ ಓದುತ್ತಿದ್ದ ತಮ್ಮ ಸಹಪಾಠಿ ಅಥವಾ
ಯಾವುದೋ ಊರಿನ ಯಾವುದೋ ಬಸ್ಟಾಪಿನಲ್ಲಿ ಕೆಲಕಾಲ ದರ್ಶನ ಕೊಟ್ಟ ಒಬ್ಬ ಚೆಲುವಿನ ಹೆಣ್ಣುಮಗಳು ಅಥವಾ
ತಾವು ಮದುವೆಯಾಗಬೇಕು ಎಂದುಕೊಂಡಿದ್ದ ತಮ್ಮ ಸಹೋದ್ಯೋಗಿ.....
ಹೀಗೆ ತಾವು ಹಿಂದೆಂದೋ ಪ್ರೀತಿಸಿದ್ದ
ಹುಡುಗಿಯರನ್ನು ದಿನನಿತ್ಯ ನೆನೆಸಿಕೊಂಡು ನಿಟ್ಟುಸಿರು ಬಿಡುತ್ತಿರುತ್ತಾರೆ. ಅವರ ಆ ನೆನಪಿನಲ್ಲಿ
ತಮ್ಮ ಪ್ರೇಯಸಿಯರು ನಿತ್ಯ ನೂತನವಾಗಿರುತ್ತಾರೆ. ಜೊತೆಯಲ್ಲಿರುವ ಹೆಂಡತಿ ದಿನೇ ದಿನೇ ಮುದುಕಿಯಾಗುತ್ತಿದ್ದರೂ
ಸಹ ಅವರ ಕಲ್ಪನೆಯಲ್ಲಿರುವ ಪ್ರೇಯಸಿಗಂತೂ ಎಂದಿಗೂ ಹರೆಯವೇ..
ಎಷ್ಟು ಚಂದ ಅವಳ ನೆನಪು.. ಅವಳ
ಮಾತು.. ಅವಳ ನಡೆ.. ಅವಳ ವೈಯ್ಯಾರ.. ನೆನೆಸಿಕೊಂಡಷ್ಟೂ ಅವರ ಮನಸಿಗೆ ಕಚಗುಳಿ ಇಟ್ಟಂತಾಗುತ್ತದೆ.
ತಮಗೆ ಮಕ್ಕಳಾಗಿ ಮೊಮ್ಮಕ್ಕಳಾಗಿ ಕಡೆಗೆ ಮರಿಮಕ್ಕಳ ನಿರೀಕ್ಷೆಯಲ್ಲಿದ್ದರೂ ಸಹಾ ಅಪ್ಸರೆಯಂತಹಾ ಪ್ರೇಯಸಿಯ
ನೆನಪೇ ಅವರ ಮನಸ್ಸಿಗೆ ಹಿತ ತರುತ್ತದೆ. ಅವರ ಪ್ರೇಯಸಿ ಎಂದಿಗೂ ಅಪ್ಸರೆಯೇ. ಏಕೆಂದರೆ ಅವರು
ಕಡೆಯ ಬಾರಿ ಆಕೆಯನ್ನು ನೋಡಿದ ಚಿತ್ರ ಮಾತ್ರ ಅವರ ಸ್ಮೃತಿಪಟಲದಲ್ಲಿ ಉಳಿದಿರುತ್ತದೆ.
ಮುಂದೆ ಕಾಲ ಸರಿದಂತೆ ತಮ್ಮ
ಅಪ್ಸರೆಯಂತಹ ಪ್ರೇಯಸಿಗೂ ವಯಸ್ಸಾಗಿ ಮುಖದಲ್ಲಿ ನೆರಿಗೆ ಮೂಡಿ, ಕೂದಲು ಬೆಳ್ಳಗಾಗುತ್ತದೆ ಎನ್ನುವುದನ್ನು ಅವರು
ಮರೆತಿರುತ್ತಾರೆ. ಏಕೆಂದರೆ ಆ ನಂತರ ಅವರು ಅವಳನ್ನು ಕಂಡಿರುವುದಿಲ್ಲವಲ್ಲ. ಹಾಗಾಗಿ
ಅವರಿಗೆ ತಮ್ಮ ಹಳೆಯ ಪ್ರೇಮಿಯನ್ನು ನೆನೆಸಿಕೊಂಡಷ್ಟೂ ಉತ್ಸಾಹ ಮೂಡುತ್ತದೆ. ಇದೇ ಉತ್ಸಾಹ ತಮ್ಮ
ಹೆಂಡತಿಯನ್ನು ನೋಡಿದರೆ ಸಿಗುವುದಿಲ್ಲ ಅಂತ ಅವರ ಅಪವಾದ.
ಆದರೆ ಅವರು ಒಂದು ಮುಖ್ಯವಾದ ವಿಷಯ
ಮರೆತಿರುತ್ತಾರೆ.
ತಮ್ಮ ಹೆಂಡತಿಯಲ್ಲದ ಬೇರೆ
ಹೆಣ್ಣುಮಕ್ಕಳನ್ನು ಅವರು ಹೊರ ಪ್ರಪಂಚದಲ್ಲಿ ನೋಡಿರುತ್ತಾರಷ್ಟೇ. ಅಂದರೆ ಕಾಲೇಜು, ಕೆಲಸದ ಸ್ಥಳ, ಸಾರ್ವಜನಿಕ ಸ್ಥಳ ಇತ್ಯಾದಿಗಳಲ್ಲಿ.
ಇಂತಹ ಕಡೆಗಳಲ್ಲಿ ಯಾವ ಹೆಣ್ಣೇ ಆಗಲಿ ಅಚ್ಚುಕಟ್ಟಾಗಿ ಶೃಂಗರಿಸಿಕೊಂಡೇ ಬಂದಿರುತ್ತಾಳೆ. ಅದೇ
ಹೆಣ್ಣುಮಕ್ಕಳನ್ನು ಬಿಡುವಿನ ಸಮಯದಲ್ಲಿ ಅವರವರ ಮನೆಗಳಲ್ಲಿ ನೋಡಿದರೆ ಅವರೂ ಸಹ ಇವರ ಹೆಂಡತಿಯರ
ಹಾಗೆ ನೈಟಿ ಹಾಕಿಕೊಂಡು,
ತುರುಬು ಕಟ್ಟಿಕೊಂಡು, ಮುಖವನ್ನೂ ಸಹಾ ತೊಳೆಯದೇ ಇರುತ್ತಾರೆ. ಅದೇ ರೀತಿಯಲ್ಲಿ
ಇವರ ಚಂದವಿಲ್ಲದ ಹೆಂಡತಿಯರು ತಮ್ಮ ತಮ್ಮ ಗಂಡಂದಿರುಗಳಿಗೆ ಅಂದವಿಲ್ಲದವರ ಹಾಗೆ ಕಂಡರೂ, ಮನೆಯಿಂದ
ಹೊರ ಹೋಗುವಾಗ ಚಂದವಾಗಿಯೇ ಡ್ರೆಸ್ ಮಾಡಿಕೊಳ್ಳುತ್ತಾರೆ. ಇದರಿಂದ
ಬೇರೆಯವರ ಕಣ್ಣುಗಳಿಗೆ ಅಪ್ಸರೆಯರ ಹಾಗೆ ಕಾಣುತ್ತಾರೆ.
ವಿವಾಹದ ಬಂಧವೆಂದರೆ ಕೇವಲ ಅಂದ ಚಂದ ಮಾತ್ರ ತುಂಬಿದ ಬಂಧವಲ್ಲ. ಹೆಂಡತಿಯಾದವಳು ಎಷ್ಟು ಚಂದವಿದ್ದಾಳೆ ಎನ್ನುವುದಕ್ಕಿಂತ ಕಷ್ಟದಲ್ಲಿ ಹೇಗೆ ಕೈ ಹಿಡಿಯುತ್ತಾಳೆ, ಸೋತಾಗ ಹೇಗೆ ಮೇಲೆತ್ತುತ್ತಾಳೆ, ಗಂಡನಿಗೆ ಹೇಗೆ ಆಸರೆಯಾಗುತ್ತಾಳೆ ಎಂಬುದು ಮುಖ್ಯ. ಗಂಡನಾದವನಿಗೆ ತನ್ನ ಆರೋಗ್ಯ ಕೈಕೊಟ್ಟಾಗಲೇ ಹೆಂಡತಿಯ ಹೃದಯದ ಸೌಂದರ್ಯ ಕಾಣುವುದು. ಕೈಲಾಗದೇ ಮಲಗಿದ್ದಾಗ ಯಾವ ಪ್ರೇಯಸಿಯೂ ಬಂದು ನೋಡುವುದಿಲ್ಲ. ಯಾವ ಸುಂದರಿಯೂ ಇವನ ಸೇವೆ ಮಾಡುವುದಿಲ್ಲ.
ಆಗ ಇವನ ಸೇವೆ ಮಾಡುವುದು ಆ ಚಂದವಿಲ್ಲದ ಹೆಂಡತಿಯೇ. ಒಂದೇ ಒಂದು ಬಾರಿ ಈ ರೀತಿಯ ಅನುಭವವಾದ ನಂತರ ಗಂಡನಿಗೆ ತನ್ನ ಹೆಂಡತಿಯೇ ಜಗತ್ತಿನ ಎಲ್ಲರಿಗಿಂತಾ ಪರಮ ಸುಂದರಿ ಅನ್ನಿಸ ತೊಡಗುತ್ತಾಳೆ. ಇಲ್ಲಿಗೆ ಸೌಂದರ್ಯ ಎಂಬುದು ಆಂತರಿಕ ವಿಷಯ ಎಂದು ಅವನಿಗೆ ಜ್ಞಾನೋದಯ ಆಗುತ್ತದೆ.
******************
ಕೆ.ಎ.ಸೌಮ್ಯ , ಮೈಸೂರು

