ತಾವೇ ತೋಡಿಕೊಂಡ ಹಳ್ಳದಲ್ಲಿ ತಾವೇ ಬಿದ್ದವರು
"ಇಷ್ಟಕ್ಕಾಗಿ ಮದುವೆಯಾದೆನೇ....?"
ಅವಳು ಕೇವಲ ಇಪ್ಪತ್ತರ ಯುವತಿ. ಎಲ್ಲಾ ಹೆಣ್ಣುಮಕ್ಕಳು ಯೌವ್ವನದಲ್ಲಿ ಹೂವಿನಂತೆ ನಳನಳಿಸಬೇಕಾದ ವಯಸ್ಸಿದು. ಆದರೆ ಏನು ಕಾರಣವೋ ಅವಳ ಮುಖ ಬಾಡಿದೆ.
ನಡುಮನೆಯಲ್ಲಿ ಅವಳ ಮೂವರೂ ಮಕ್ಕಳು ಆಟವಾಡುತ್ತಿದ್ದಾರೆ. ಒಂದಾದ ಮೇಲೊಂದರಂತೆ ವರ್ಷಕ್ಕೊಂದು ಮಗುವಿನಂತೆ ಮೂರು ಮಕ್ಕಳನ್ನು ಹೆತ್ತಿದ್ದಾಳೆ ಆಕೆ.
ಅವಳು ಮದುವೆ ಆಗಿದ್ದಾದರೂ ಏಕೆ? ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು...
ತಾನು ಪ್ರೀತಿಸುತ್ತಿರುವ ಹುಡುಗನಿಂದ ಮನೆಯವರು ತನ್ನನ್ನು ಎಲ್ಲಿ ದೂರ ಮಾಡುತ್ತಾರೆಯೋ ಎಂದು ಹೆದರಿ ಅವಸರದಲ್ಲಿ ಮದುವೆಯಾದಳು.
ಅಲ್ಲಿಯವರೆಗೂ ವಿರೋಧಿಸುತ್ತಿದ್ದ ಅವಳ ಮನೆಯವರು ಅವಳು ಮದುವೆಯಾಗುತ್ತಿದ್ದಂತೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವಂತೆ ತೆಪ್ಪಗಾಗಿಬಿಟ್ಟರು. ಸೈಲೆಂಟಾಗಿ ಈ ವಿಷಯದಿಂದ ಹಿಂದೆ ಸರಿದರು. ಇನ್ನು ಅವರು ಏನೂ ತೊಂದರೆ ಮಾಡಲಿಕ್ಕಿಲ್ಲ ಎಂದುಕೊಂಡು ಗಂಡನೊಡನೆ ಹೊಸಜೀವನ ಶುರು ಮಾಡಿದಳು ಅವಳು.
ಮದುವೆಯಾದಾಗ ಆಕೆ ಹದಿನಾರು ವರ್ಷದ ಬಾಲೆ ಅಷ್ಟೇ. ತಾಯಿ ಮನೆಯಲ್ಲಿ ಒಂದು ಹುಲ್ಲು ಕಡ್ಡಿ ಎತ್ತಿಟ್ಟು ಸಹ ಗೊತ್ತಿಲ್ಲ ಆಕೆಗೆ. ಸದಾ ಓದುತ್ತಲೋ, ಟಿವಿ ನೋಡುತ್ತಲೋ ಹೊತ್ತು ಕಳೆಯುತ್ತಿದ್ದಳು.
ಆದರೆ ಇಲ್ಲಿ ಸೊಸೆಯಾದ ಮೇಲೆ ಹಾಗಾಗಲಿಲ್ಲ. ಅವಳೆಷ್ಟೇ ವಯಸ್ಸಿನವಳಾಗಿರಲಿ ಚಿಕ್ಕವಳೋ ದೊಡ್ಡವಳೋ ಸೊಸೆಯೆಂದರೆ ಸೊಸೆಯಷ್ಟೇ. ಮನೆ ಕೆಲಸದ ಭಾರವೆಲ್ಲಾ ಆಕೆಯ ಮೇಲೆಯೇ ಬಿದ್ದಿತು. ಜೊತೆಯಲ್ಲಿ ಮೈ ಭಾರ ಬೇರೆ.
ಹದಿನಾರು ವರ್ಷದ ಯುವತಿ ಮೊದಲ ಬಾರಿ ಗರ್ಭಿಣಿಯಾದಾಗ ನಿಜಕ್ಕೂ ಅವಳಿಗೆ ಹಾಗೆಂದರೇನು ಅಂತಲೇ ಗೊತ್ತಿರಲಿಲ್ಲ.
ನಂತರ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಾಲಾಗಿ ಮೂರು ಮಕ್ಕಳನ್ನು ಹೆತ್ತು ಕೂತಳು. ಬಾಣಂತನ ಮಾಡಲು ತವರಿಲ್ಲದೇ, ಸರಿಯಾದ ಆರೈಕೆಯಿಲ್ಲದೇ ಇಪ್ಪತ್ತು ವರ್ಷಕ್ಕೇ ಮುದುಕಿಯಂತಾದಳು.
ರಾತ್ರಿ ಗಂಡನ ಬಯಕೆಗಳನ್ನು ಯಾಂತ್ರಿಕವಾಗಿ ಪೂರೈಸುವಾಗ ಇಷ್ಟಕ್ಕಾಗಿಯೇ ಮದುವೆಯಾದೆನೇ? ಎಂಬ ಪ್ರಶ್ನೆ ಬಿಟ್ಟೂ ಬಿಡದೇ ಕಾಡುತ್ತಿತ್ತು.
ನಗು ಎಂಬುದೇ ಮರೆತು ಹೋಯಿತು ಅವಳಿಗೆ.
ಗಂಡನ ಬಯಕೆ ಈಡೇರಿಸುತ್ತಾ, ಮನೆಯವರ ಸೇವೆ ಮಾಡುತ್ತಾ, ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಆದರ್ಶ ಸತಿ ಎನ್ನಿಸಿಕೊಳ್ಳಬೇಕಿತ್ತು ಅವಳು.
ಆದರೆ ಮುಚ್ಚಿಟ್ಟ ಬಯಕೆಗಳು ಆಕೆಯನ್ನು ಪ್ರತಿಕ್ಷಣವೂ ಕೊರೆಯುತ್ತಿತ್ತು. ಈಗ ಆಕೆಗೆ ತಾನೂ ಓದಿದ್ದರೆ ತನ್ನ ಕಾಲ ಮೇಲೆ ತಾನೇ ನಿಲ್ಲಬಹುದಿತ್ತು ಅಂತನ್ನಿಸುತ್ತಿತ್ತು.
ತಾನೂ ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಂಡಿದ್ದರೆ ತನಗೆ ಬೇಕೆನಿಸಿದ್ದೆಲ್ಲಾ ತಾನೇ ಖರೀದಿಸಬಹುದಿತ್ತು ಅಂತ ಅಂದುಕೊಳ್ಳುತ್ತಿದ್ದಳು.
ಆದರೆ ಹತ್ತನೇ ಕ್ಲಾಸನ್ನೂ ಪಾಸ್ ಮಾಡದ ತನಗೆ ಯಾವ ಕೆಲಸ ಕೊಡಬಹುದು? ಕಸ ಗುಡಿಸುವ ಕೆಲಸ ಸಿಗಬಹುದಷ್ಟೇ. ಮೂರು ಹೆತ್ತ ಮೇಲೆ ಗಂಡನಿಗೂ ತನ್ನ ಮೇಲಿನ ಆಸಕ್ತಿ ಕಡಿಮೆ ಆಗಿತ್ತೇನೋ?
ಮಾತುಮಾತಿಗೂ ಅವಳು ಏನೂ ಓದಿಲ್ಲವೆಂದು, ತಾನೊಬ್ಬನೇ ದುಡಿಯಬೇಕಾಗಿದೆ ಎಂದೂ ಆಡಿಕೊಳ್ಳುತ್ತಿದ್ದ.
ಅವನು ತಾನೇ ಏನು ದೊಡ್ಡವನೇ? ಕೇವಲ ಇಪ್ಪತ್ತೊಂದು ವರ್ಷದ ಯುವಕ. ಸಂಸಾರದ ಭಾರ ಹೊರುವಷ್ಟು ಶಕ್ತನೂ ಅಲ್ಲ, ಪ್ರಬುದ್ಧನೂ ಅಲ್ಲ.
ಈಗ ಈ ವಯಸ್ಸಿಗೇ ಮೂರು ಮಕ್ಕಳ ತಂದೆ ಎನಿಸಿಕೊಂಡಿದ್ದಾನೆ. ಹದಿನಾರರ ವಯಸ್ಸಿನಲ್ಲಿದ್ದಾಗ ಅವಳ ಮೇಲೆ ಇದ್ದ ಪ್ರೀತಿ ಈಗ ಒಂದು ಪರ್ಸೆಂಟ್ ಕೂಡ ಇಲ್ಲ.
ಆದರೆ ಮದುವೆಯಾಗಿರುವುದರಿಂದ ಅನಿವಾರ್ಯವಾಗಿ ಅವಳ ಜೊತೆ ಬಾಳುತ್ತಿದ್ದಾನೆ.
ಇಬ್ಬರಿಗೂ ಈ ಮದುವೆ, ಮಕ್ಕಳ ಜವಾಬ್ದಾರಿ ಬೇಕಿರಲಿಲ್ಲ. ಏಕೆಂದರೆ ಅವರು ಮೆಚ್ಚಿ ಮದುವೆಯಾದಾಗ ಇಬ್ಬರಿಗೂ ಹದಿನೆಂಟು ಸಹ ತುಂಬಿರಲಿಲ್ಲ.
ಜೀವನದ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರೌಢತೆ ಅವರು ಹೊಂದಿರಲಿಲ್ಲ. ಆತುರಾತುರವಾಗಿ ನಿರ್ಧಾರ ತೆಗೆದುಕೊಂಡಾಗ ಜೀವನ ಬಹಳ ದೊಡ್ಡದು ಎಂಬ ಊಹೆಯೂ ಇರಲಿಲ್ಲ.
ತಾವೇನೋ ಮಹಾನ್ ಕೆಲಸ ಮಾಡುತ್ತಿದ್ದೇವೆ, ಆ ಮೂಲಕ ಸಮಾಜಕ್ಕೆ ಸೆಡ್ಡು ಹೊಡೆಯುತ್ತಿದ್ದೇವೆ ಎಂಬ ಭ್ರಮೆ ಮಾತ್ರ ಇತ್ತು. ಒಂದು ರೀತಿಯ ವಿಚಿತ್ರವಾದ ಹಠ ಇಬ್ಬರಲ್ಲಿಯೂ.
ದೊಡ್ಡವರು, ತಿಳಿದವರು ಹೇಳಿದ ಯಾವ ಮಾತೂ ಕಿವಿಯೊಳಗೆ ಹೋಗುತ್ತಿರಲಿಲ್ಲ. ದೊಡ್ಡವರನ್ನು ವಿರೋಧಿಸುವುದೇ ಕ್ರಾಂತಿ ಅಂತ ತಿಳಿದಿದ್ದ ದಿನಗಳವು.
ಕೇವಲ ಒಂದು ಹಠಕ್ಕಾಗಿ ಮನೆಯವರನ್ನು ದೂರ ಮಾಡಿಕೊಂಡು,ಓದನ್ನೂ ಮುಂದುವರೆಸದೇ, ಅಸಹಾಯಕಳಾಗಿ ಬಾಳುತ್ತಿದ್ದಾಳೆ ಆಕೆ.
ನಾಳೆ ಈಕೆಯ ಗಂಡನಾದವನು ಮತ್ತೊಬ್ಬಳಿಂದ ಆಕರ್ಷಿತನಾಗಿ ಇವಳನ್ನು ತೊರೆದು ಹೋದರೆ ತನ್ನ ಜೀವನವನ್ನು ಮುನ್ನಡೆಸುವಷ್ಟು ಶಕ್ತವಂತಳೂ ಅಲ್ಲ ಇವಳು.
ಯಾವುದೋ ಒಂದು ದುರ್ಬಲ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರಕ್ಕಾಗಿ ಜೀವನವಿಡೀ ಪಶ್ಚಾತ್ತಾಪದಿಂದ ಬೇಯಬೇಕಾಗಿದೆ.
ಕೆ.ಎ.ಸೌಮ್ಯ
ಮೈಸೂರು


