ಹೆಣ್ಣೆಂಬ ಹಿಂಜರಿಕೆ : ಮಹಿಳಾ ಲೇಖನ

 



ಸಣ್ಣದಾಗಿ ಹೊಟ್ಟೆ ಹಸಿಯತೊಡಗಿತು ಅವಳಿಗೆ. ಜೋರಾಗಿ ಹೇಳಲು ಒಂದು ರೀತಿಯ ಮುಜುಗರ. ಸಹೋದ್ಯೋಗಿಗಳು 'ಏನ್ರೀ... ತಿನ್ನೋದಕ್ಕೇ ಹುಟ್ಟಿರುವ ಹಾಗೆ ಆಡ್ತೀರಲ್ರೀ?' ಅಂದುಬಿಟ್ಟರೆ ಅಂತ ಅಳುಕು. ಆದರೆ ಇತ್ತ ಹೊಟ್ಟೆಯ ಹಸಿವನ್ನೂ ತಡೆಯಲು ಆಗುತ್ತಿಲ್ಲ. 

ಬಾಸ್ ಇದ್ಯಾವುದನ್ನೂ ಗಮನಿಸದೇ "ನಾನು ಊಟಕ್ಕೆ ಹೋಗಿ ಬರ್ತೀನಿ.. ಅಷ್ಟರಲ್ಲಿ ಇಷ್ಟನ್ನು ಪ್ರಿಪೇರ್ ಮಾಡಿ ಇಡಿ" ಅಂತ ಹೇಳಿ ಹೋದರು. 

'ಬಡ್ಡಿಮಗ ತಾನು ಮಾತ್ರ ಊಟಕ್ಕೆ ಹೋದ. ಅದೇ ಥರ ಬೇರೆಯವರಿಗೂ ಹೊಟ್ಟೆ ಇರುತ್ತದೆ ಅಂತ ಮಾತ್ರ ಅರ್ಥ ಆಗೋಲ್ಲ ಇವನಿಗೆ..' ಬೈದುಕೊಂಡಳು.

ಬರೇ ಊಟದ ವಿಷಯ ಅಂತಲ್ಲ. ಯಾವ ವಿಷಯಕ್ಕೂ ಅವಳಿಗೆ ಹೀಗೇ ಆಗುತ್ತಿತ್ತು. ತನಗೆ ಬೇಕಾದ ಹಕ್ಕನ್ನು ಅವಳಿಂದ ಪಡೆಯಲಾಗುತ್ತಲೇ ಇರಲಿಲ್ಲ. ಮೀಟಿಂಗ್ ನಡುವೆಯೇ ಅವಳಿಗೆ ಬಾತ್ರೂಮಿಗೆ ಹೋಗಲು ಅರ್ಜೆಂಟ್ ಆಗುತ್ತಿತ್ತು. ಆಗ ದಢಾರನೆ ಎದ್ದು ಹೋಗುವ ಧೈರ್ಯ ಇರಲಿಲ್ಲ ಅವಳಿಗೆ. ಆ ವಿಷಯ ಎಲ್ಲರ ನಡುವೆ ಪ್ರಸ್ತಾಪಿಸಲು ಅವಳಿಗಂತೂ ಬಾಯಿಯೇ ಬರುತ್ತಿರಲಿಲ್ಲ. ಇಡೀ ದಿನ ಮೀಟಿಂಗ್ ಮುಗಿಯುವ ತನಕ ಕಾದಿದ್ದು ನಂತರ ಓಡುತ್ತಿದ್ದಳು. ಅದೇ ಪುರುಷ ಸಹೋದ್ಯೋಗಿಗಳು ಸಿಗರೆಟ್ ಸೇದಲು ಆಗಾಗ ಎದ್ದು ಹೊರ ಹೋಗುತ್ತಿದ್ದರು. ಅವರಲ್ಲಿ ಯಾವುದೇ ರೀತಿಯ ಹಿಂಜರಿಕೆ ಇರುತ್ತಿರಲಿಲ್ಲ. ಆದರೆ ಇವಳಿಗೇನೋ ಒಂದು ರೀತಿ ಮುಜುಗರ.

ತಿಂಗಳಿಗೊಂದು ಸಿ ಎಲ್ ಇರುವುದೇ ಆ ದಿನಗಳಲ್ಲಿ ರೆಸ್ಟ್ ಮಾಡಲಿಕ್ಕೆ ಅಂತ. ಆದರೆ ಇದುವರೆಗೂ ಅವಳು ಆ ರಜಾ ಸೌಲಭ್ಯವನ್ನು ಬಳಸಿಕೊಂಡಿಲ್ಲ. ಬೇಡ ಅಂತಲ್ಲ. ಕೇಳಲು ಆಗುತ್ತಿರಲಿಲ್ಲ ಅವಳಿಂದ. ಈ ಬಾರಿ ಹೇಗಾದರೂ ಆಫೀಸಿಗೆ ಹೋಗಿ ಬಿಡುವ, ಮುಂದಿನ ಬಾರಿ ರಜ ತೆಗೆದುಕೊಳ್ಳುವ ಅಂತ ಮುಂದೆ ಹಾಕುತ್ತಲೇ ಇದ್ದಳು. ಆ ದಿನಗಳಲ್ಲಿ ರೆಸ್ಟ್ ಮಾಡಿದರೆ ಮುಂದೆ ಕೆಲಸದಲ್ಲಿ ಅವಳ ಕಾರ್ಯ ದಕ್ಷತೆ ಹೆಚ್ಚುತ್ತದೆ ಅನ್ನುವುದು ಅವಳಿಗೆ ಗೊತ್ತಿತ್ತು. 

ಆದರೆ ಈ ವಿಷಯ ಕೇಳಲು ಬಾಸ್ ರೂಮಿಗೆ ಹೋದಾಗಲೆಲ್ಲ ಏನೋ ಒಂದು ರೀತಿಯ ಸನ್ನಿ ಆವರಿಸುತ್ತಿತ್ತು ಅವಳಿಗೆ. ತಾನಿಲ್ಲದೇ ಹೋದರೆ ಕೆಲಸ  ನಡೆಯುವುದು ಹೇಗೆ ಎಂಬ ಅಹಂ ಬಂದುಬಿಡುತ್ತಿತ್ತು. ಏನೂ ಕೇಳದೇ ಸುಮ್ಮನೆ ವಾಪಸ್ ಬಂದು ಬಿಡುತ್ತಿದ್ದಳು. ತಾನಿಲ್ಲದೇ ಇದ್ದರೂ ಕೆಲಸದ ಪಾಡಿಗೆ ಕೆಲಸ ನಡೆಯುತ್ತದೆ ಎನ್ನುವುದು ಗೊತ್ತಿದ್ದರೂ ಆ ಅಹಂ ಅವಳ ತಲೆ ಬಿಟ್ಟು ಹೋಗುತ್ತಿರಲಿಲ್ಲ.

ಯಾರಾದರೂ ತಮ್ಮ ಕೆಲಸದಲ್ಲಿ ತಪ್ಪು ಮಾಡಿ ಅದನ್ನು ತನ್ನ ಮೇಲೆ ಹೊರಿಸಿದಾಗ 'ಇಲ್ಲ.. ಆ ತಪ್ಪು ತಾನು ಮಾಡಿಲ್ಲ' ಎಂದು ಪ್ರತಿಭಟಿಸುವ ಧೈರ್ಯವೂ ಅವಳಿಗೆ ಇರಲಿಲ್ಲ. ಯಾಕೆ ಸುಮ್ಮನೆ ರಿಸ್ಕು, ನಾಳೆಯ ದಿನ ಇವರ ಜೊತೆಗೇ ತಾನು ಮತ್ತೆ ಮಾತನಾಡಬೇಕು, ಇಲ್ಲ ಅಂತ ಇಂದು ಜಗಳವಾಡಿದರೆ ನಾಳೆ ತನಗೇ ಕಷ್ಟ ಎಂದುಕೊಂಡು ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತಿದ್ದಳು.  

ಈ ವಿಷಯ ಅರಿತವರು ಅವಳನ್ನು ಚೆನ್ನಾಗಿ ಆಟವಾಡಿಸುತ್ತಿದ್ದರು. ತನ್ನ ಹಕ್ಕುಗಳಿಗಾಗಿ ಹೋರಾಡದ, ಹೇಳಿದ್ದನ್ನು ಚಾಚೂತಪ್ಪದೇ ಕೇಳುವ ಅವಳೆಂದರೆ ಅವಳ ಮೇಲಧಿಕಾರಿಗಳಿಗೆ ಬಲು ಇಷ್ಟವಾಗುತ್ತಿತ್ತು. ಆದರೆ ಅವಳ ಈ ವ್ಯಕ್ತಿತ್ವ ಸ್ವತಃ ಅವಳಿಗೇ ಇಷ್ಟವಾಗುತ್ತಿರಲಿಲ್ಲ.

ಒಬ್ಬಂಟಿಯಾಗಿದ್ದಾಗ ಆಕೆಗೆ ಮೂಡುವ ಆಲೋಚನೆಗಳು ಎಲ್ಲರೂ ಇದ್ದಾಗ ಬಹಳ ನೀರಸ ಎನ್ನಿಸಿಬಿಡುತ್ತಿದ್ದವು. ಎಲ್ಲರೂ ಒಂದು ಮಾತನಾಡುತ್ತಿರುವಾಗ ತಾನು ಬೇರೆಯದೇ ರೀತಿಯಲ್ಲಿ ಹೇಳಿದರೆ ನಗೆಪಾಟಲಾಗಬೇಕಾಗುತ್ತದೆ ಎಂಬ ಭಯವೇ ಆಕೆಯನ್ನು ಎಲ್ಲರ ಯೋಚನೆಯಂತೆಯೇ ತಾನೂ ಯೋಚಿಸುವಂತೆ ಮಾಡುತ್ತಿತ್ತು. 

ಗುಂಪಿನ ಮಧ್ಯೆ ತನ್ನ ಅಭಿಪ್ರಾಯ ಹೇಳಿ, ಎಲ್ಲರೂ ಚದುರಿ ಹೋದ ಮೇಲೆ ತಾನ್ಯಾಕೆ ಹಾಗೆ ಹೇಳಿದೆ ಅಂತ ಯೋಚಿಸುತ್ತಿದ್ದಳು ಆಕೆ. ಎಲ್ಲರೂ ಒಪ್ಪುವ ಹಾಗೆ ಹೇಳಿದರೆ ತನಗೆ ರಿಸ್ಕ್ ಇರಲಿಕ್ಕಿಲ್ಲ ಅಂತ ಹಾಗೆ ಹೇಳಿರಬಹುದು. ಆದರೆ ತನ್ನ ಅಭಿಪ್ರಾಯ ತನಗೇ ಹಿಡಿಸಿಲ್ಲ ಎನ್ನುವುದು ಆಕೆಗೆ ಗೊತ್ತಾಗುತ್ತಿತ್ತು. ಆದರೆ ಪುನಃ ಗುಂಪು ಎದುರಾದಾಗ ಆಕೆ ತನ್ನ ವೈಯುಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ಹಿಂಜರಿಯುತ್ತಿದ್ದಳು.

ಸಾಮಾನ್ಯವಾಗಿ ಹೆಣ್ಣುಮಕ್ಕಳು ಹೊಂದಿಕೊಂಡು ಹೋಗುವ ಗುಣ ಹೊಂದಿರುತ್ತಾರೆ. ಅವರ ಮನಸ್ಸಿಗೆ ತೀವ್ರತರವಾದ ಆಘಾತವಾಗದ ಹೊರತು ಅವರು ಹೊಸದೇನನ್ನೂ ಯೋಚಿಸಲು ಹೋಗುವುದಿಲ್ಲ. ಸದಾ ಕುಡಿದುಕೊಂಡು ಬಂದು ಹೊಡೆಯುವ ಗಂಡನ ಹೆಂಡತಿಯನ್ನು ನಾವು ಉದಾಹರಣೆ ನೀಡಬಹುದು. 

ಆಕೆ ಒಂದಲ್ಲ ಒಂದು ದಿನ ತನ್ನ ಗಂಡ ಕುಡಿಯುವುದನ್ನು ನಿಲ್ಲಿಸಬಹುದು ಅಂತ ಕಾಯುವುದಿಲ್ಲ. ಬದಲಿಗೆ ಕುಡಿದು ಬಂದು ಒಂದೇಟು ಹೊಡೆದುಬಿಟ್ಟರೆ ಅಂದಿಗೆ ಅವನ ಹಿಂಸೆ ಮುಗಿಯಿತು, ಇನ್ನು ನಾಳೆಯ ತನಕ ಚಿಂತೆಯಿಲ್ಲ ಅಂತಲೇ ಯೋಚಿಸುತ್ತಾಳೆ. 

ಎದುರಾಗುವ ಸನ್ನಿವೇಶಗಳನ್ನು ತನಗೆ ಅನುಕೂಲವಾಗುವಂತೆ ಬದಲಿಸಿಕೊಂಡು, ಮನಸ್ಸನ್ನು ಅದಕ್ಕೆ ಹೊಂದಿಕೊಂಡು ಹೋಗುವಂತೆ ಟ್ರೈನ್ ಮಾಡುತ್ತಾಳೆ. ಹಾಗಾಗಿಯೇ ಆಕೆಗೆ ಕೆಸರಿನ ಮಧ್ಯೆ ಕಮಲ ಮಾತ್ರ ಕಾಣುತ್ತದೆ. ಮುಳ್ಳಿನ ಮಧ್ಯೆ ನಗುವ ಗುಲಾಬಿ ಮಾತ್ರ ಕಾಣುತ್ತದೆ. 

ಇದೊಂದು ಮೀಟಿಂಗ್ ಮುಗಿದುಬಿಟ್ಟರೆ ಸಾಕು, ಇನ್ಮುಂದೆ ತಾನು ಸರಿಯಾದ ಸಮಯಕ್ಕೆ ಬಾತ್ರೂಮಿಗೆ ಹೋಗುತ್ತೇನೆ ಅಂತ ತನಗೆ ತಾನೇ ಹೇಳಿಕೊಳ್ಳುತ್ತಾಳೆ. ಆದರೆ ಪ್ರತೀ ಮೀಟಿಂಗಿನಲ್ಲಿಯೂ ಇದೇ ಪುನಾರವರ್ತನೆಯಾಗುತ್ತದೆ. ಹೇಳಲು ಅವಳಿಗೆ ಬಾಯಿಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಸು ನೋಡುವವರಿಗಿಲ್ಲ.......

Published in Vijaya Karnataka on 28.07.2019
**************

ಕೆ.ಎ.ಸೌಮ್ಯ
ಮೈಸೂರು