ಹಚ್ಚಿಕೊಂಡ ಬಂಧನ ಸಡಿಲವಾಗುವುದೇಕೆ.....? : ..... ಮಹಿಳಾ ಲೇಖನ
ಮದುವೆಯ ನಂತರ ಪ್ರತಿಯೊಬ್ಬ ಹೆಣ್ಣು ಮಗಳಿಗೂ ತಾನು ಹುಟ್ಟಿ ಬೆಳೆದ ಸ್ಥಳ ಬಿಟ್ಟು ಹೊಸ ಮನೆ, ಹೊಸ ಪರಿಸರದಲ್ಲಿ ವಾಸಿಸಬೇಕಾಗಿರುತ್ತದೆ. ಹಿರಿಯರು ನೋಡಿ ಮಾಡಿದ್ದ ಮದುವೆಯಾಗಿದ್ದರೆ ಮದುವೆಯ ನಂತರವೂ ಗಂಡ-ಹೆಂಡತಿ ಇಬ್ಬರೂ ಪರಸ್ಪರ ಅಪರಿಚಿತರಾಗಿರುತ್ತಾರೆ. ಮದುವೆ ಎನ್ನುವುದು ತಮ್ಮ ಜೀವನದ ಕಡ್ಡಾಯ ಭಾಗವಾದ್ದರಿಂದ ಅಲ್ಲಿಯವರೆಗೂ ಯೋಚಿಸಿರುತ್ತಾರೆಯೇ ಹೊರತು ನಂತರದ ಬದುಕಿನ ಬಗ್ಗೆ ಇಬ್ಬರೂ ಚಿಂತಿಸಿರುವುದಿಲ್ಲ.
ಆದರೆ ದಿನ ಕಳೆದಂತೆ ಇಬ್ಬರೂ ಆಪ್ತರಾಗುತ್ತಾ ಹೋಗುತ್ತಾರೆ. ನೋಡಿ ನಮ್ಮ ಹಿರಿಯರ ಜಾಣ್ಮೆ ಎಷ್ಟಿದೆ?
ಪರಸ್ಪರ ಅವಲಂಬನೆಯಿದ್ದಾಗ ಇಬ್ಬರಲ್ಲಿಯೂ ಮುರಿಯಲಾಗದ ಬಂಧ ಏರ್ಪಡುತ್ತದೆ. ಹಾಗಾಗಿ ಮದುವೆಯ ನಂತರ ಇಬ್ಬರೂ ಒಟ್ಟಿಗೆ ವಾಸ ಮಾಡುವಾಗ ಅರಿತೋ ಅರಿಯದೆಯೋ ಪರಸ್ಪರ ಅಪರಿಚಿತರಾಗಿದ್ದರೂ ಸಹ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಅವರಿಲ್ಲದೇ ತಾವಿಲ್ಲ, ತಾವಿಲ್ಲದೇ ಅವರಿಲ್ಲ ಎಂಬಂತಹ ಬಂಧವನ್ನು ತಮ್ಮ ನಡುವೆ ಏರ್ಪಡಿಸಿಕೊಳ್ಳುತ್ತಾರೆ.
ಮದುವೆಗೆ ಮೊದಲು ಇಬ್ಬರ ನಡುವೆ ಸ್ವಲ್ಪ ಮಟ್ಟಿಗೆ ಮಾತುಕಥೆ ನಡೆದಿದ್ದರೂ ಸಹ ಮದುವೆಯ ನಂತರ ಅವನಾಗಲೀ ಅಥವಾ ಅವಳಾಗಲೀ ತಾವು ಕಂಡು ಕೇಳಿದ ಪ್ರತಿಯೊಂದು ವಿಷಯವನ್ನೂ ತಮ್ಮ ಸಂಗಾತಿಗೆ ತಿಳಿಸಬೇಕು ಎಂಬ ಹುಮ್ಮಸ್ಸಿನಲ್ಲಿರುತ್ತಾರೆ. ಸಂಗಾತಿಯ ಪ್ರತಿಯೊಂದು ಅಗತ್ಯಕ್ಕೂ ಸ್ಪಂದಿಸಬೇಕು, ಅವರ ಪ್ರೀತಿಗೆ ಪ್ರತಿಯಾಗಿ ಮತ್ತಷ್ಟು ಪ್ರೀತಿ ಕೊಡಬೇಕು ಎಂಬ ಹಪಾಹಪಿಯಲ್ಲಿರುತ್ತಾರೆ.
ಗಂಡ ಆಫೀಸಿಗೆ ಹೋದ ಮೇಲೆ ಹೆಂಡತಿ ಫೋನ್ ಮಾಡುವುದು ಅಥವಾ ಹೆಂಡತಿಗೆ ಗಂಡನೇ ಫೋನ್ ಮಾಡಿ ಮಾತನಾಡುವುದು, ಇಬ್ಬರ ನಡುವಿನ ಕೊನೆಯಿಲ್ಲದ ಮೆಸೇಜುಗಳು... ಒಟ್ಟಿನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರರು ಎಂಬಂತೆ ಹಚ್ಚಿಕೊಳ್ಳುತ್ತಾರೆ.
ಸ್ವಲ್ಪ ದಿನಗಳು ಕಳೆದ ನಂತರ ಯಾಕೋ ಇಬ್ಬರೂ ಮಂಕಾಗುತ್ತಾರೆ.
ಮನುಷ್ಯ ಸದಾ ಹೊಸ ವಿಷಯದ ಕಡೆ ತುಡಿಯುತ್ತಿರುತ್ತಾನೆ. ಹಾಗಾಗಿ ದಿನವೂ ಒಂದೇ ರೀತಿಯಾದ ಏರುಪೇರಿಲ್ಲದ ಜೀವನದಿಂದ ಅವನು ಬಹುಬೇಗ ಆಕರ್ಷಣೆ ಕಳೆದುಕೊಳ್ಳುತ್ತಾನೆ. ಇಬ್ಬರ ನಡುವಿನ ತುಡಿತ ಮೊದಲಿನಂತಿಲ್ಲ ಎಂಬುದು ಬಹು ಬೇಗ ಇಬ್ಬರ ಅರಿವಿಗೂ ಬರುತ್ತದೆ. ಆದರೆ ನೀರಸವಾಗಿರುವ ಜೀವನವನ್ನು ರಸವತ್ತಾಗಿಸಲು ಏನು ಮಾಡಬೇಕು ಎಂದು ಇಬ್ಬರಿಗೂ ಗೊತ್ತಿರುವುದಿಲ್ಲ.
ಹಾಗಾಗಿ ಜೀವನ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿರುತ್ತದೆ. ಕೊನೆಕೊನೆಗೆ ಅವರಿಬ್ಬರ ನಡುವೆ ಸಂವಹನವೇ ನಿಂತು ಹೋಗಿ ಬಿಡುತ್ತದೆ.
ಬರೇ ಯಾಂತ್ರಿಕವಾಗಿ ಜೀವನ ನಡೆಸುತ್ತಿರುತ್ತಾರೆ. ಈ ಸಮಯದಲ್ಲಿಯೇ ಇಬ್ಬರಿಗೂ ತಮ್ಮ ತಮ್ಮ ಸಂಗಾತಿಗಳ ಮೇಲಿನ ಕುತೂಹಲ ಕಡಿಮೆಯಾಗಿ ಬೇರೆ ವಿಷಯಗಳ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ಹೆಣ್ಣಿಗೆ ಮದುವೆಗೂ ಮೊದಲಿನ ಹವ್ಯಾಸಗಳು ಕಾಡಿದರೆ, ಗಂಡಿಗೆ ತನ್ನ ಪ್ರೊಫೆಷನ್ ಮೇಲಿನ ಗಮನ ಹೆಚ್ಚುತ್ತದೆ.
ಅವನಿಗೆ ಹೆಂಡತಿಗಿಂತಲೂ ತನ್ನ ಆಫೀಸಿನಲ್ಲಿ ಸಿಗುವ ಶಾಂತಿಯೇ ಉತ್ತಮ ಎಂದೆನಿಸಲು ಶುರುವಾಗುತ್ತದೆ. ಮನೆಗೆ ತಡವಾಗಿ ಬರಲಾರಂಭಿಸುತ್ತಾನೆ. ಹೆಂಡತಿ ಎಲ್ಲಿಗೆ ಓಡಿ ಹೋಗುತ್ತಾಳೆ ಬಿಡು ಎಂದು ಅಸಡ್ಡೆ ತೋರುತ್ತಾನೆ.
ಯಾವುದೇ ವಿಷಯವಾಗಲೀ ಮೊದಮೊದಲು ತೋರುವ ಉತ್ಸಾಹವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ಬಹಳ ಕಷ್ಟ. ಅದರಲ್ಲಿಯೂ ನಾವು ಇಷ್ಟಪಟ್ಟ ವಸ್ತು ನಮಗೆ ಸಿಕ್ಕ ಮೇಲಂತೂ ಅದರ ಮೇಲಿನ ಆಸಕ್ತಿಯೇ ಕಡಿಮೆಯಾಗಿಬಿಡುತ್ತದೆ. ಆ ವಸ್ತು ಕೈಗೆ ಸಿಗದೇ ಆಟವಾಡಿಸಿದಾಗ ಅದರ ಮೇಲಿನ ಗಮನ ಹೆಚ್ಚಿರುತ್ತದೆ.
ಎಲ್ಲರೂ ಮದುವೆಯಾದರು ಹಾಗಾಗಿ ತಾನೂ ಮದುವೆಯಾಗಬೇಕು ಎಂದು ಮದುವೆಯಾಗುತ್ತಾರೆ ಅಷ್ಟೇ. ಮದುವೆಯ ನಂತರ ತಮ್ಮ ಸಂಗಾತಿಯೇ ಸರ್ವಸ್ವ ಎಂದುಕೊಳ್ಳುತ್ತಾರೆ. ದಿನ ಕಳೆದಂತೆ ಮದುವೆ ಎಂದರೆ ಇಷ್ಟೇನಾ? ಎಂಬ ನಿರ್ಣಯಕ್ಕೆ ಬರುತ್ತಾರೆ.
ಈಗ ಮನಸ್ಸು ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ಅಂತ ಯೋಚಿಸುತ್ತಿರುತ್ತದೆ.
ಇದು ತಾತ್ಕಾಲಿಕವಷ್ಟೇ. ಹೊಸತನ್ನು ಅನ್ವೇಷಿಸಲು ಹೋಗಿದ್ದ ಮನಸ್ಸು ಬಹುಬೇಗ ತನ್ನ ಪ್ರೀತಿ ಪಾತ್ರರ ಬಳಿ ಮರಳುತ್ತದೆ. ಅದು ಹೇಗೆ ಅಂತ ಇಬ್ಬರಿಗೂ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಮತ್ತೆ ಅವರ ನಡುವೆ ಸಂವಹನ ಏರ್ಪಟ್ಟು ಮತ್ತೊಮ್ಮೆ ಬಿಟ್ಟಿರಲಾರದಷ್ಟು ಹಚ್ಚಿಕೊಳ್ಳುತ್ತಾರೆ.
ಮತ್ತೆ ಫೋನ್ ಕರೆಗಳು, ಮೆಸೇಜುಗಳಲ್ಲಿ ಮುಳುಗೇಳುತ್ತಾರೆ. ಗಂಡನಿಗೆ ಹೆಂಡತಿಯೂ, ಹೆಂಡತಿಗೆ ಗಂಡನೂ ಹೊಸಬರಂತೆ ಕಾಣತೊಡಗುತ್ತಾರೆ. ಹೊಸದೆಂದುಕೊಂಡಾಗ ಕುತೂಹಲ ಜಾಸ್ತಿಯಾಗುವುದು ಸಹಜ ತಾನೇ?
ಇಬ್ಬರ ನಡುವೆ ಅದೆಷ್ಟೇ ಪ್ರೀತಿಯಿರಲಿ, ಸಂಬಂಧ ಒಂದು ಹಂತದಲ್ಲಿ ಯಾಂತ್ರಿಕವಾಗುತ್ತಿದೆ ಅಂತ ತಿಳಿದು ಬಂದಾಗ ಅದನ್ನು ತಾನೇ ತಾನಾಗಿ ನವೀಕರಿಸಿಕೊಳ್ಳಲು ಬಿಟ್ಟು ಬಿಡುವುದು ಉತ್ತಮ. ಯಾವಾಗಲೂ ಮನಸ್ಸು ಒಂದೇ ರೀತಿ ಇರುವುದಿಲ್ಲ. ಆಗಾಗ ಸ್ವಲ್ಪ ಬದಲಾವಣೆ ಬಯಸುತ್ತಿರುತ್ತದೆ.
ಹಾಗಾಗಿ ತಮ್ಮ ಸಂಗಾತಿ ತಮ್ಮಿಂದ ದೂರವಾಗುತ್ತಿದ್ದಾರೆ ಅಂತನಿಸಿದರೆ ಅವರನ್ನು ತಮ್ಮ ಪಾಡಿಗೆ ಬಿಟ್ಟರೆ ಸಾಕು. ಕೆಲವು ದಿನಗಳಾದ ನಂತರ ಅವರೇ ಹತ್ತಿರವಾಗುತ್ತಾರೆ. ಒಟ್ಟಿಗೆ ವಾಸಿಸುವಾಗ ಒಂದು ರೀತಿಯಾದ ಆತ್ಮೀಯ ಸಂಬಂಧ ಇಬ್ಬರ ನಡುವೆ ಏರ್ಪಟ್ಟಿರುತ್ತದೆ. ಅದು ಅಷ್ಟು ಸುಲಭವಾಗಿ ದುರ್ಬಲವಾಗುವುದಿಲ್ಲ.
ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ಬಾಳುವಾಗ ಇಬ್ಬರ ನಡುವೆ ಸ್ನೇಹವೋ, ಪ್ರೇಮವೋ ಅಥವಾ ಪರಸ್ಪರ ಅವಲಂಬನೆಯೋ ಯಾವುದಾದರೊಂದು ಮೂಡಿ ಆ ದಾಂಪತ್ಯ ಬಹು ಕಾಲ ಉಳಿಯುತ್ತದೆ. ಅವರೇನಾದರೂ ಅಂತರ ಕಾಯ್ದುಕೊಳ್ಳಲು ಬಯಸಿದರೆ ಸುಮ್ಮನಿದ್ದುಬಿಟ್ಟರಾಯ್ತು. ಹೇಗಿದ್ದರೂ ಮನಸ್ಸು ಒಂದು ವಿಷಯಕ್ಕೆ ಹೊಂದಿಕೊಂಡರೆ ಮತ್ತೆ ಬದಲಾವಣೆ ಮಾಡುವುದು ಕಷ್ಟಸಾಧ್ಯ.
ಇವನ ಕಷ್ಟಕ್ಕೆ ಅವಳೂ, ಅವಳ ಕಷ್ಟಕ್ಕೆ ಇವನೂ ಸ್ಪಂದಿಸಿದಾಗ ಇಬ್ಬರ ಬಾಂಧವ್ಯವೂ ಗಟ್ಟಿಯಾಗುತ್ತಾ ಹೋಗುತ್ತದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥವಾಗುತ್ತಾ ಹೋಗುತ್ತಾರೆ. ಒಮ್ಮೆ ಈ ವಿಷಯ ಗಟ್ಟಿಯಾಗಿ ಮನಸ್ಸಿನಲ್ಲಿ ಕುಳಿತ ಮೇಲೆ ಸಂಗಾತಿ ಎಷ್ಟೇ ದೂರವಾದರೂ ಸಹ ಕೊನೆಗೊಮ್ಮೆ ಹತ್ತಿರವಾಗಿಯೇ ಆಗುತ್ತಾರೆ. ಆದ್ದರಿಂದ ಸಂಗಾತಿಯ ಪ್ರೀತಿಗೆ ಕೊಟ್ಟಷ್ಟೇ ಮಹತ್ವವನ್ನು ಅವರ ಉದಾಸೀನಕ್ಕೂ ನೀಡುವುದು ಒಳ್ಳೆಯದು.
ಏಕೆಂದರೆ ಈ ಉದಾಸೀನ ಶಾಶ್ವತವಲ್ಲ. ಅದು ಬಹುಬೇಗನೇ ಪ್ರೀತಿಗೆ ಬದಲಾವಣೆ ಹೊಂದುತ್ತದೆ.
**********
-ಕೆ.ಎ.ಸೌಮ್ಯ
ಮೈಸೂರು
Published in vishwavani vivah on 06.03.2019



