ವಧುಪರೀಕ್ಷೆ ಅಂದು-ಇಂದು


ಬಹಳ ಹೊತ್ತಿನಿಂದ ಚಡಪಡಿಸುತ್ತಾ ಕೂತಿದ್ದ ಆತ. ಇಂದು ತನ್ನ ಮನೆಯವರೊಂದಿಗೆ ಹುಡುಗಿ ನೋಡಲು ಬಂದಿದ್ದ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಕನ್ಯೆಯೊಡನೆ ನೇರ ಮಾತುಕಥೆ ಕಾರ್ಯಕ್ರಮವಿತ್ತು. 


ಅದೂ ಅವಳೊಡನೆ ಏಕಾಂತದಲ್ಲಿ.

 

"ನಮ್ ಹುಡುಗಿ ಹುಡುಗನ ಜೊತೆ ಸ್ವಲ್ಪ ಮಾತನಾಡಬೇಕಂತೆ" ಅಂತ ಕನ್ಯಾಪಿತೃ ಹೇಳಿದೊಡನೆ ಅವನ ಎದೆಬಡಿತ ಏರುತ್ತಿತ್ತು


ತಕ್ಷಣ ಅವನಿಗೆ ತನ್ನ ಹೆಸರಿನಿಂದ ಹಿಡಿದು ಎಲ್ಲಾ ವಿಷಯವೂ ಮರೆತೇ ಹೋಗುತ್ತಿತ್ತು. ಅವಳೇನು ಕೇಳುವಳೋ, ತಾನೇನು ಉತ್ತರಿಸುವುದೋ ಅಂತ ಭಯವಾಗುತ್ತಿತ್ತು


ಕೆಲಸದ ಸಂದರ್ಶನಕ್ಕೂ ಅವನು ಇಷ್ಟು ಹೆದರಿರಲಿಲ್ಲವೇನೋ? ಇಂದು ಅವಳ ಮನೆಯವರ ಕಡೆಯಿಂದ "ಕರೆ" ಈಗ ಬರಬಹುದು ಆಗ ಬರಬಹುದು ಅಂತ ಕಾಯುತ್ತಾ ಕುಳಿತಿದ್ದ.

 

ಇದು ವಧುಪರೀಕ್ಷೆಯೋ ಆಥವಾ ವರಪರೀಕ್ಷೆಯೋ ಅಂತ ಕನ್ಫ್ಯೂಸ್ ಆಗುತ್ತಿತ್ತು ಅವನಿಗೆ.

 

ಹಿಂದೆಲ್ಲಾ ಹುಡುಗಿ ನೋಡಲು ಹೋದರೆ ಗಂಡುಮಕ್ಕಳಿಗೆ ಏನೂ ಕೆಲಸವಿರುತ್ತಿರಲಿಲ್ಲ. ಅಪ್ಪ-ಅಮ್ಮ ಕರೆದುಕೊಂಡು ಹೋದ ಮನೆಗೆ ಹೋಗುವುದು, ಅಲ್ಲಿ ಕೈಗೆ ಕೊಟ್ಟ ಉಪ್ಪಿಟ್ಟು ತಿಂದು, ಕಾಫಿ ಹೀರುವುದು, ಹೊರ ಬಂದ ಕನ್ಯೆಯನ್ನು ಒಮ್ಮೆ ನೋಡುವುದು


ಇಷ್ಟೇ ಕೆಲಸ ಇರುತ್ತಿದ್ದುದು


ಅಲ್ಲದೇ ನಾಚುತ್ತಾ ತಲೆತಗ್ಗಿಸಿ ಹೊರಬರುತ್ತಿದ್ದ ಹುಡುಗಿಯ ಮುಖವೇ ಅವನಿಗೆ ಕಾಣುತ್ತಿರಲಿಲ್ಲ. ಇಬ್ಬರ ಜಾತಕವೂಹೊಂದಾಣಿಕೆ ಆಗುತ್ತೆ ಅಂತಾದ ಮೇಲೆ ಹುಡುಗಿ ನೋಡಲು ಹೇಗಿದ್ದಾಳೆ ಅಂತ ಗಂಡಿನ ಮನೆಯವರು ಜಾಸ್ತಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

 

ಆಗೆಲ್ಲಾ ಹೆಣ್ಣಿನ ಮನೆಯವರು ಏನಾದರೂ ಪ್ರಶ್ನೆ ಕೇಳಿದರೆ ಗಂಡಿನ ತಂದೆಯೋ, ತಾಯಿಯೋ ಅಥವಾ ಬ್ರೋಕರೋ ಉತ್ತರ ಕೊಡುತ್ತಿದ್ದರು. ಮದುಮಗ ಬಾಯಿಬಿಡುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಮನೆಯವರಿಗೆ ಒಪ್ಪಿಗೆಯಾದರೆ ಮದುವೆ ಸೆಟ್ ಆಗಿಯೇ ಬಿಡುತ್ತಿತ್ತು.


ಈಗ ಅದೆಲ್ಲವನ್ನೂ ಅವನೊಬ್ಬನೇ ಏಕಾಂಗಿಯಾಗಿ ಮಾಡಬೇಕಿದೆ. ಸ್ವಲ್ಪ ಹೊತ್ತಿನಲ್ಲಿಯೇ ಹುಡುಗ, ಹುಡುಗಿ ಇಬ್ಬರನ್ನೂ ಟೆರೇಸ್ ಮೇಲೆ ಕಳಿಸಲಾಗುತ್ತದೆ. ಹುಡುಗಿಯರು ಹಿಂದಿನ ಕಾಲದವರಂತೆ ನಾಚದೇ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾರೆ


ಎಲ್ಲಿ ಕೆಲಸ,‌ ಎಷ್ಟು ಸಂಬಳ, ಮನೆ ಇದೆಯಾ? ಕಾರ್ ಇದೆಯಾ? ಇದೆಲ್ಲಾ ಪ್ರಶ್ನೆಗಳು ಹಳತಾದವು. ಇದನ್ನೆಲ್ಲಾ ಹುಡುಗಿಯರು ಬ್ರೋಕರ್ ಬಳಿಯೇ ತಿಳಿದಿರುತ್ತಾರಲ್ಲವೇ?


"ನಿಮಗೆ ಜಸ್ಟಿನ್ ಬೀಬರ್ ಇಷ್ಟನಾ?" ಎಂಬ ಅನಿರೀಕ್ಷಿತ ಪ್ರಶ್ನೆ ಅವನನ್ನು ಕಂಗಾಲಾಗಿಸುತ್ತದೆ. ಯಾಕೆ ಎಂದರೆ ಬರೇ ಜಾತಕ ಹೊಂದಾಣಿಕೆ ಆಗುವುದು ಮುಖ್ಯವಲ್ಲ, ಇಬ್ಬರ ಟೇಸ್ಟ್ ಕೂಡ ಮ್ಯಾಚ್ ಆಗಬೇಕು ಎಂದುತ್ತರ ಬರುತ್ತದೆ


ಕಾರು ಸ್ವಂತದ್ದಾ ಅಥವಾ ಕಂತಿನಲ್ಲಿ ತೆಗೆದುಕೊಂಡದ್ದಾ? ಇನ್ನೆಷ್ಟು ವರ್ಷದಲ್ಲಿ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಲು ಸಾಧ್ಯ? ಮದುವೆ ಆದ ಮೇಲೆ ನಾನು ಸೀರೆ ಉಡಲೇಬೇಕಾ? ಎಂಗೇಜ್ಮೆಂಟ್ ರಿಂಗ್ ಯಾವ ಹರಳಿನದ್ದು? ನೀವು ಆಫೀಸಿಗೆ ದಿನಾ ಇದೇ ಥರ ಹೋಗ್ತೀರಾ? ಸ್ವಲ್ಪ ಔಟ್ ಡೇಟೆಡ್ ಅನ್ನಿಸ್ತಾ ಇದೆ. ನೀವು ಸ್ವಲ್ಪ ಬದಲಾಗಬೇಕಲ್ಲ ಎಂಬೆಲ್ಲಾ ಮಾತುಗಳನ್ನು ಕೇಳಿ ಹುಡುಗನ ಹೃದಯ ಬಾಯಿಗೆ ಬಂದಿರುತ್ತದೆ.

 

ಹಿಂದೆ ಅವನು ಹುಡುಗಿಯರನ್ನು ಕಂಡಿಲ್ಲವೆಂದಲ್ಲ. ಕಾಲೇಜಿನಲ್ಲಿ ಓದುತ್ತಿದ್ದಾಗ ಒಂದಿಬ್ಬರು ಹುಡುಗಿಯರೊಂದಿಗೆ ಸಲಿಗೆಯ ಸ್ನೇಹವಿತ್ತು. ಆಗ ಹುಡುಗಿಯರು ಇವನ ಒಂದು ನೋಟಕ್ಕಾಗಿ ಕಾತರಿಸುತ್ತಿದ್ದರು. ನಿನ್ನ ಪ್ರೀತಿ ಒಂದಿದ್ರೆ ಸಾಕು ಕಣೋ ಎನ್ನುತ್ತಿದ್ದರು. ಅಪ್ಪಿತಪ್ಪಿಯೂ ಮದುವೆ ಆದಮೇಲೆ ನನ್ನನ್ನು ಹೇಗೆ ಸಾಕ್ತೀಯ ಅಂತ ಪ್ರಶ್ನಿಸುತ್ತಿರಲಿಲ್ಲ. ಅವರೂ ಹುಡುಗಿಯರೇ, ಇವರೂ ಹುಡುಗಿಯರೇ...

 

ಆದರೆ ಪ್ರೀತಿಸುವ ಹೆಣ್ಣಿಗೂ ಮದುವೆಯಾಗಬೇಕಾದ ಹೆಣ್ಣಿಗೂ ಎಷ್ಟು ವ್ಯತ್ಯಾಸ..

 

ಪ್ರೀತಿಸುವ ಹೆಣ್ಣು ಪದೇ ಪದೇ ನನ್ನ ಕೈ ಬಿಡೋಲ್ಲ ತಾನೇ ಅಂತ ಕನ್ಫರ್ಮ್ ಮಾಡಿಕೊಂಡರೆ, ಮದುವೆಯಾಗಬೇಕಾದ ಹೆಣ್ಣಿಗೆ ಮುಂದೆ ಹುಟ್ಟುವ ಮಕ್ಕಳನ್ನು ಯಾವ ಸ್ಕೂಲಿಗೆ ಸೇರಿಸುವುದು ಎಂಬ ಚಿಂತೆ


ಪ್ರೀತಿಸುವ ಹೆಣ್ಣನ್ನು ಬಣ್ಣದ ಮಾತುಗಳಿಂದ ಮರುಳು ಮಾಡಬಹುದು. ಆದರೆ ಮದುವೆಯಾಗಬೇಕಾದ ಹುಡುಗಿಯ ಜೊತೆ ವಾಸ್ತವವನ್ನಷ್ಟೇ ಮಾತನಾಡಲು ಸಾಧ್ಯ


ಒಂದು ಕ್ಷಣ ಅವನಿಗೆ ಹುಡುಗಿ ನೋಡುವ ಪದ್ಧತಿ ಎಲ್ಲಾ ಬಿಟ್ಟು ಹಾಕಿ ಪ್ರೀತಿಸುವ ಒಬ್ಬ ಹುಡುಗಿಯೊಂದಿಗೆ ಓಡಿ ಹೋಗೋಣ ಅಂತನ್ನಿಸುವುದು ಸುಳ್ಳಲ್ಲ. ಆದರೂ ಹುಡುಗರಿಗೆ ತಾವು ನೋಡಿಕೊಂಡ ಹುಡುಗಿಯರಿಗಿಂತಲೂ ಮನೆಯವರು ನೋಡಿ ಮೆಚ್ಚಿದ ಹುಡುಗಿಯ ಮೇಲೆ ನಂಬಿಕೆ ಹೆಚ್ಚು.

 

ಹುಡುಗಿಯರು ತಾವು ಪ್ರೀತಿಸಿದ ಹುಡುಗನಿಗಾಗಿ ಮನೆಯವರೆಲ್ಲರನ್ನೂ ಬಿಟ್ಟು ಓಡಿ ಬರಲು ತಯಾರಿರುತ್ತಾರೆ. ಆದರೆ ಹುಡುಗರಿಗೆ ಮನೆಯವರನ್ನು ಮೆಚ್ಚಿಸಿ ಮದುವೆಯಾಗಬೇಕು ಎಂಬಾಸೆ ಇರುತ್ತದೆ


ಏಕೆಂದರೆ ಹುಡುಗಿಯರು ಮದುವೆಯವರೆಗೂ ಯೋಚಿಸಿದರೆ ಹುಡುಗರು ಮದುವೆಯ ನಂತರದ ಬದುಕನ್ನು ಯೋಚಿಸುತ್ತಾರೆ. ಎಲ್ಲರನ್ನೂ ಎದುರು ಹಾಕಿಕೊಂಡು ಬದುಕುವುದು ಅಷ್ಟು ಸುಲಭವಲ್ಲ


ಪ್ರೀತಿಯೇ ಬೇರೆ, ಜೀವನವೇ ಬೇರೆ


ಹಾಗಾಗಿ ತಮಗೆ ಹುಡುಗಿಯನ್ನು ಹುಡುಕುವ ಜವಾಬ್ದಾರಿ ಮನೆಯವರಿಗೆ ಬಿಡುತ್ತಾರೆ. ಆದರೆ ವಧುಪರೀಕ್ಷೆ ಮಾಡಲು ಹೋಗಿ ವಧುವಿನ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕಂಗಾಲಾಗುತ್ತಾರೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮುಂದಿನ ವಧುಪರೀಕ್ಷೆಗೆ ತಯಾರಾಗುತ್ತಾರೆ.

(Published in Vishwavani on 28.11.2018)

***********

ಕೆ..ಸೌಮ್ಯ, ಮೈಸೂರು