ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ
ಹೆಣ್ಣುಮಕ್ಕಳಿಗೆ ಮಾನವೇ ಆಸ್ತಿ. ಜೀವನಪೂರ್ತಿ ಅವಳು
ಸುಶೀಲವಂತೆಯಾಗಿ, ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕೆಂದೇ ಎಲ್ಲರ ಆಸೆ. ಹಾಗಾಗಿಯೇ ಮನು ಸಹ ತನ್ನ
ಮನುಸ್ಮೃತಿಯಲ್ಲಿ "ಹೆಣ್ಣು ತನ್ನ ಬಾಲ್ಯದಲ್ಲಿ ತಂದೆಯ ಆಸರೆ, ಯೌವ್ವನದಲ್ಲಿ ಗಂಡನ ಆಸರೆ
ಮತ್ತು ವೃದ್ಧಾಪ್ಯದಲ್ಲಿ ತನ್ನ ಮಕ್ಕಳ ಆಸರೆಯಲ್ಲಿ ಇರಬೇಕು" ಅಂತ ಹೇಳಿದ್ದಾನೆ.
ಇದರರ್ಥ ಹೆಣ್ಣು ಅಬಲೆ ಅಂತಲ್ಲ. ಅವಳ ಮಾನಾಪಮಾನದ ರಕ್ಷಣೆ ಈ
ಮೂವರಿಗೆ ಸೇರುತ್ತದೆ ಎಂದರ್ಥ. ಅವಳು ಮುಂದಿನ ಜನಾಂಗಕ್ಕೆ ಆರೋಗ್ಯಕರವಾದ ಮತ್ತು ಸುಸಂಕೃತವಾದ
ಮಕ್ಕಳನ್ನು ಹೆತ್ತು ಕೊಡುವುದರಿಂದ ಅವಳನ್ನು ರಕ್ಷಿಸಬೇಕಾದ್ದು ಪುರುಷರ ಕರ್ತವ್ಯ.
ಆದರೆ ಈಗೇನಾಗುತ್ತಿದೆ?
ತಮ್ಮ ಮನೆಯ ಹೆಣ್ಣು ಮಕ್ಕಳು ಚೆನ್ನಾಗಿದ್ದರೆ ಅಷ್ಟೇ ಸಾಕು
ಎಂದು ಎಲ್ಲರು ಯೋಚಿಸುತ್ತಿದ್ದಾರೆ. ಬೇರೆಯವರಿಗೆ ಏನಾದರೆ ತಮಗೇನು ಎಂಬಂತೆ
ವರ್ತಿಸುತ್ತಿದ್ದಾರೆ. ಯಾವುದೋ ಹೆಣ್ಣಿನ ಮೇಲೆ ಅತ್ಯಾಚಾರ ನಡೆದಿದೆ ಎಂದಾಗ ಒಂದಾಗಿ
ಪ್ರತಿಭಟಿಸಬೇಕಾದವರು "ಯಾರದ್ದೋ ತಾನೇ?" ಎಂದು ನಿರ್ಲಕ್ಷ್ಯದಿಂದ ಇರುತ್ತಿದ್ದಾರೆ.
ಅವಳೇ ಸರಿ ಇಲ್ಲ, ಅವಳ್ಯಾಕೆ ಅಲ್ಲಿಗೆ ಹೋಗಬೇಕಿತ್ತು, ಅಂತಹ ಬಟ್ಟೆ ಯಾಕೆ ಹಾಕಬೇಕಿತ್ತು ಎಂಬಂತಹ
ಮಾತನ್ನಾಡಿ ತಮ್ಮ ಮನೆಯ ಮಕ್ಕಳು ಹಾಗಲ್ಲಪ್ಪ ಎಂಬಂತೆ ಪೋಸ್ ಕೊಡುತ್ತಿದ್ದಾರೆ. ಅತ್ಯಾಚಾರವನ್ನು
ಎಷ್ಟು ಸಿಂಪಲ್ ಆಗಿ ನೋಡುತ್ತಿದ್ದಾರೆ ಎಂದರೆ, ಹೆಣ್ಣಿನ ಮಾನ ಸಂರಕ್ಷಣೆಗೆ ಸದಾ
ಸನ್ನದ್ಧವಾಗಿರುತ್ತಿದ್ದ ಸಂಸ್ಕೃತಿ ನಮ್ಮದೇನಾ ಅಂತ ಆಶ್ಚರ್ಯ ಪಡುವಷ್ಟು!!
ಅತ್ಯಾಚಾರವೆಂದರೆ ನೇರವಾಗಿ ಹೆಣ್ಣಿನ ದೇಹದ ಮೇಲಿನ ದಾಳಿ. ಹೆಣ್ಣು ತನಗಾಗದ ಪುರುಷ ಕೇವಲ
ತನ್ನನ್ನು ಗುರಾಯಿಸಿ ನೋಡಿದರೂ ಸಹಿಸಲಾರಳು. ಇನ್ನು ತನ್ನ ದೇಹವನ್ನು ತನ್ನೊಪ್ಪಿಗೆ ಇಲ್ಲದೇ
ಸ್ಪರ್ಷಿಸುವುದನ್ನು ಹೇಗೆ ಸಹಿಸುವಳು? ಉಡುಗೆ ತೊಡುಗೆಗೆ ಬಹಳ ಮಹತ್ವ ಕೊಡುವ ಹೆಣ್ಣುಮಕ್ಕಳು ತನ್ನ
ಬಟ್ಟೆಯನ್ನು ಬೇರೆ ಯಾರೋ ಎಲ್ಲರೆದುರು ಕಿತ್ತೆಸೆಯುತ್ತಿದ್ದರೆ ಹೇಗೆ ಸಹಿಸುತ್ತಾರೆ?? ಬಚ್ಚಲು
ಮನೆಯಲ್ಲದೇ ಬೇರೆಲ್ಲೂ ಬೆತ್ತಲಾಗದ ಹೆಣ್ಣುಮಕ್ಕಳು ಯಾರ ಮುಂದೆಯೋ ಆ ಸ್ಥಿತಿಯಲ್ಲಿ ಹೇಗೆ ಫೀಲ್
ಮಾಡಿಕೊಳ್ಳುತ್ತಾರೆ ಅಂತ ನಮಗೆ ಊಹಿಸಿಕೊಳ್ಳಲಾದರೂ ಸಾಧ್ಯವೇ?
ಹಾಗಾದರೆ ಇದನ್ನು ಬರೇ ದೇಹಕ್ಕೆ ಆದ ಅವಮಾನ ಎಂದುಕೊಳ್ಳಬೇಕಾ?
ಖಂಡಿತಾ ಇಲ್ಲ. ಇದು ನಮ್ಮ ಸಂಸ್ಕೃತಿಯ ಮೇಲೆ ಆದ ಅವಮಾನ. ಹೆಣ್ಣುಮಕ್ಕಳಿಗೆ
ಚಿಕ್ಕಂದಿನಿಂದಲೇ ಹೇಳಿಕೊಡುವ ಸೀತಾ, ಮಂಡೋದರಿಯರ ನೀತಿಕಥೆಗಳಿಗೆ ಮಾಡುವ ಅವಮಾನ. ಪರ
ಪುರುಷನನ್ನು ಕಣ್ಣೆತ್ತಿಯೂ ನೋಡಬಾರದು ಅಂತ ಹೇಳಿಕೊಡುವ ಆದರ್ಶಗಳಿಗೆ ಮಾಡುವ ಅವಮಾನ. ಇವರು
ಹೇಳುವ ಆದರ್ಶಗಳನ್ನೆಲ್ಲಾ ಮೈಗೂಡಿಸಿಕೊಂಡು ಬೆಳೆದ ಹೆಣ್ಣು ಮಗಳೊಬ್ಬಳು ಅತ್ಯಾಚಾರದಂತಹ ಸಂದರ್ಭದಲ್ಲಿ
ಎಷ್ಟು ಹಿಂಸೆ ಪಟ್ಟಿರಬೇಕು ಎಂದು ಅಂದಾಜಿಸಲು ಸಾಧ್ಯವೇ? ತನ್ನನ್ನು ತಾನು ರಕ್ಷಿಸಿಕೊಳ್ಳಲು
ಮಾಡಿದ ಸಾಹಸವೆಲ್ಲವೂ ವ್ಯರ್ಥವಾದಾಗ ಅವಳೆಷ್ಟು ಅತ್ತಿರಬಹುದು? ಅದಕ್ಕಿಂತಲೂ ಅವಳಿಗೆ ಅತಿ
ಹೆಚ್ಚು ನೋವು ಕೊಡುವುದೆಂದರೆ ಆತ ಏನೂ ಶಿಕ್ಷೆಯಾಗದೇ ಸಮಾಜದಲ್ಲಿ ತಲೆ ಎತ್ತಿ ನಡೆದಾಗ.
ಮಾಡದ ತಪ್ಪಿಗೆ ಹೆಣ್ಣುಮಕ್ಕಳು ಜನರ ನೂರೆಂಟು ಕುಹಕ ಸಹಿಸಿ ಬದುಕಬೇಕು. ಆದರೆ ಅದೇ ಅತ್ಯಾಚಾರಿಗಳಿಗೆ
ಕನಿಷ್ಟ ಶಿಕ್ಷೆ ಕೂಡ ಆಗುವುದಿಲ್ಲ. ಅಷ್ಟೇ ಅಲ್ಲದೇ ಜನರು ಅನ್ಯಾಯಕ್ಕೊಳಗಾದ ಹೆಣ್ಣಿನ ಬಗ್ಗೆ
ಚಕಾರವೆತ್ತದೇ ಪುರುಷನನ್ನು ಬೆಂಬಲಿಸುತ್ತಾರೆ. ಇದೊಂದು ಸಾಮಾಜಿಕ ಪಿಡುಗಾಗಿದೆ. ಹೆಣ್ಣು ಮಕ್ಕಳಿಗೆ
ನೂರೆಂಟು ಕಾನೂನು ವಿಧಿಸುವವರು ತಮ್ಮವರಿಂದಲೇ ಅವಳು ಅನ್ಯಾಕ್ಕೊಳಗಾದಾಗ ಅದಕ್ಕೂ ಅವಳನ್ನೇ ದೂರುವ
ಮೂಲಕ ಹೆಣ್ಣಿನ ನೈತಿಕ ಧೈರ್ಯ ಕುಗ್ಗಿಸುತ್ತಾರೆ.
ಅತ್ಯಾಚಾರ ಮಾಡಿದ ಪುರುಷ ತಲೆ ಎತ್ತಿ ಓಡಾಡಬಲ್ಲವನಾದರೆ, ಯಾವ ತಪ್ಪೂ ಮಾಡಿರದ ಹೆಣ್ಣು
ಮಾತ್ರ ಯಾಕೆ ತೆರೆ ಮರೆ ಜೀವನ ನಡೆಸಬೇಕು? ಅವಳಿಗೆ ಅತ್ಯಾಚಾರದ ನಂತರ ಬದುಕೇ ಇಲ್ಲವೇ? ಅವಳೂ
ಎಲ್ಲರಂತೆ ಬಾಳಲು ಅರ್ಹಳಲ್ಲವೇ? ಅವಳಿಗೆ ಜೀವನದಲ್ಲಿ ಎಲ್ಲರಂತೆ ಆಸೆ ಕನಸುಗಳಿಲ್ಲವೇ? ಜೀವನ ಅನ್ನೋದು
ಬಹು ದೊಡ್ಡದು. ಎಂದೋ ಒಂದು ದಿನ, ಯಾವುದೋ ಒಂದು ಕ್ಷಣದಲ್ಲಿ ನಡೆದ ಘಟನೆಗಾಗಿ ಅವಳೇಕೆ ಇಡೀ ಜೀವನ
ಕತ್ತಲಲ್ಲಿಯೇ ಕಳೆಯಬೇಕು?
ಊಹೂಂ.. ಈ ಬಗ್ಗೆ ಯಾರೂ ಯೋಚಿಸುವುದಿಲ್ಲ. ಎಲ್ಲರೂ ಈ ಘಟನೆಯಲ್ಲಿ ಅವಳದೆಷ್ಟು ತಪ್ಪಿದೆ
ಅಂತ ಲೆಕ್ಕ ಹಾಕುವುದರಲ್ಲಿಯೇ ಮಗ್ನರು. ಬದಲಿಗೆ ಅವಳಿಗೆ ನ್ಯಾಯ ಕೊಡಿಸುವ ಬಗ್ಗೆ ಯಾರೂ
ಚಿಂತಿಸುವುದಿಲ್ಲ. ನಮ್ಮ ಸಮಾಜನ ಹೆಣ್ಣು, ನಾವು ಹಾಕಿದ ಕಟ್ಟುಪಾಡನ್ನು ದಾಟದ ಹೆಣ್ಣು, ನಾವು
ಹೇಗಿರಬೇಕೆಂದು ಹೇಳಿದ್ದೆವೋ ಹಾಗೆಯೇ ಇದ್ದ ಹೆಣ್ಣಿಗೆ ಈಗ ನಮ್ಮಿಂದಲೇ ದೌರ್ಜನ್ಯವಾಗಿದೆ ಅಂತ
ಒಬ್ಬರೂ ಯೋಚಿಸುವುದಿಲ್ಲ. ಹೋಗಲಿ ಅವಳ ಪಾಡಿಗೆ ಅವಳನ್ನು ಬಿಡುವುದೂ ಇಲ್ಲ. ನಿತ್ಯವೂ
ಅನುಮಾನವೆಂಬ ಕೂರಂಬಿನಲ್ಲಿ ಚುಚ್ಚುತ್ತಾರೆ. ಈ ಚುಚ್ಚುವಿಕೆಯಲ್ಲಿ ಹೆಂಗಸರೂ ಇರುತ್ತಾರೆ
ಎನ್ನುವುದೇ ಈ ಸಮಾಜದ ದೊಡ್ಡ ದುರಂತ!!
ಮೊದಲಿಗೆ ದೌರ್ಜನ್ಯವಾದ ತಕ್ಷಣ ಹೆಣ್ಣುಮಕ್ಕಳು ಕಂಪ್ಲೇಂಟ್ ಕೊಡುವುದಲ್ಲ. ಅದು ಏಕೆಂದು
ಎಲ್ಲರಿಗೂ ತಿಳಿದೇ ಇದೆ. ಅತ್ಯಾಚಾರವಾಗುವಾಗ ಒಮ್ಮೆ ಬೆತ್ತಲಾದರೆ. ಕಂಪ್ಲೇಂಟ್ ಕೊಟ್ಟರೆ ಬಾರಿ
ಬಾರಿ ಬೆತ್ತಲಾಗಬೇಕಾಗುತ್ತದೆ. ಪೊಲೀಸರು, ಲಾಯರುಗಳು ಕೇಳುವ ಪ್ರಶ್ನೆಗೆ ಉತ್ತರಿಸಬೇಕು. ಹಾಗಾಗಿ
ಕಂಪ್ಲೇಂಟ್ ಕೊಟ್ಟ ಹೆಣ್ಣುಮಕ್ಕಳನ್ನು ಸಹ ಬಜಾರಿಯರು ಎಂದೇ ನಮ್ಮ ಸಮಾಜ ಪರಿಗಣಿಸುತ್ತದೆ. ಅವಳು
ಬಜಾರಿಯಾಗಿದ್ದರಿಂದ ಅವಳಿಗೆ ಸರಿಯಾಗಿ ಆಯ್ತು ಅಂತ ತೀರ್ಮಾನವನ್ನು ಕೂಡ ಕೊಟ್ಟುಬಿಡುತ್ತದೆ.
ಏನೇ ಆಗಲಿ ಮೊದಲು ಕಂಪ್ಲೇಂಟ್ ಕೊಡಬೇಕು. ನಂತರ ಕೇಸ್ ಅಟೆಂಡ್ ಮಾಡಬೇಕು. ನಂತರ ಸಾಕ್ಷಿ
ಸಮೇತ ದೌರ್ಜನ್ಯ ಪ್ರೂವ್ ಮಾಡಿ ಅವರಿಗೆ ಶಿಕ್ಷೆ ವಿಧಿಸಬೇಕು. ಒಬ್ಬ ಸಾಮಾನ್ಯ ಮನೆತನದ ಹೆಣ್ಣಿಗೆ
ಇದೆಲ್ಲಾ ಸಾಧ್ಯವಾ? ಅದಕ್ಕೇ ಎಷ್ಟೋ ಇಂತಹಾ ಕೇಸುಗಳು ಇಂದಿಗೂ ಬೆಳಕು ಕಂಡಿಲ್ಲ. ಎಂದಿಗೂ ಪೊಲೀಸ್
ಸ್ಟೇಷನ್ನು, ಕೋರ್ಟನ್ನೇ ಕಂಡಿರದ ಹೆಣ್ಣುಮಕ್ಕಳು ಇಲ್ಲೆಲ್ಲಾ ಜಯಿಸಿ ಬರಲು ಸಾಧ್ಯವೇ? ಅದೂ ಇಂಥಾ
ಪರಿಸ್ಥಿತಿಯಲ್ಲಿ?
ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳ ಗುರುತು ಮರೆ ಮಾಚಿ ಕೇವಲ ಆ ಪುರುಷನ ಗುರುತನ್ನು
ಮಾತ್ರ ಬಹಿರಂಗ ಪಡಿಸಬೇಕು. ಅಲ್ಲದೇ ವಿಶೇಷ ಪ್ರಕರಣದಡಿ ಈ ಕೇಸ್ ಅನ್ನು ಕೈಗೆತ್ತಿಕೊಂಡು
ತ್ವರಿತವಾಗಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆಗ ಆ ಹೆಣ್ಣು ಮಗಳು ಸ್ವಲ್ಪವಾದರೂ ಉಸಿರಾಡಲು
ಸಾಧ್ಯ. ಇಲ್ಲದಿದ್ದರೆ ವರ್ಷಾನುಗಟ್ಟಲೆ ಕೇಸ್ ಎಳೆಯುತ್ತಿದ್ದರೆ ಆರೋಪಿ ಜಾಮೀನಿನ ಮೇಲೆ ಹೊರ
ಬಂದು ಮಜವಾಗಿರುತ್ತಾನೆ.
ಹೇಗೆ ಆ ಹೆಣ್ಣು ಮಗಳು ಒಂದು ಕ್ಷಣದ ದೌರ್ಜನ್ಯಕ್ಕಾಗಿ ತನ್ನ ಜೀವನ ಪೂರ್ತಿ
ನರಳುತ್ತಾಳೋ. ಹಾಗೆಯೇ ಕ್ಷಣಿಕ ಆಸೆಗೆ ಬಲಿಯಾದರೆ ತಾವೂ ಜೀವನಪೂರ್ತಿ ನರಳಬೇಕಾಗುತ್ತದೆ ಎಂಬುದು
ಅರಿವಾದರೆ ಆ ಕೃತ್ಯ ಮಾಡಲು ಹೆದರುವಂತಾಗುತ್ತದೆ. ಇಲ್ಲದಿದ್ದರೆ ಬ್ರೆಡ್ ಕದ್ದವರಿಗಿಂತಲೂ ಅಗ್ಗದ
ಶಿಕ್ಷೆ ಕೊಟ್ಟಾಗ ಹೆಣ್ಣಿನ ಜೀವನ, ಶೀಲ ಯಾವುದಕ್ಕೂ ಬೆಲೆ ಇಲ್ಲ ಅಂತ ಪರೋಕ್ಷವಾಗಿ
ತಿಳಿಯುವಂತಾಗುತ್ತದೆ. ತಾನೇನು ಮಾಡಿದರೂ ನಡೆಯುತ್ತದೆ ಅಂತ ಮಾಡುವ ಅನ್ಯಾಯಕ್ಕೆ ಕೊನೆಯೇ
ಇಲ್ಲದಂತಾಗುತ್ತದೆ.
ಈ ರೀತಿಯ ಕಾನೂನು ಯಾವಾಗ ಬರಬಹುದು?

