"ಮೀ..ಟೂ.." Me Too.....



ಎಲ್ಲರ ಕೈಯಲ್ಲಿಯೂ ಮೊಬೈಲ್ ಓಡಾಡುತ್ತಿರುವುದು ನೋಡಿ ತಾನೂ ಗಂಡನ ಬಳಿ ಹಠ ಮಾಡಿ ಟಚ್ ಸ್ಕ್ರೀನ್ ಮೊಬೈಲ್ ತೆಗೆಸಿಕೊಂಡಿದ್ದಳು ಆಕೆ.‌ 


ಮೂವತ್ತು ವರ್ಷದ ವೈವಾಹಿಕ ಜೀವನದಲ್ಲಿ‌ ಈಗೀಗ ಗಂಡ ಅವಳ ಮಾತು ಕೇಳತೊಡಗಿದ್ದ. ಅದೂ ಅವಳ‌ ಅತ್ತೆ ತೀರಿಕೊಂಡ ನಂತರ ಹೆಂಡತಿಯ ಜೊತೆ ಮೊದಲಿನಷ್ಟು ಕಟ್ಟುನಿಟ್ಟಾಗಿರದೇ ಸ್ವಲ್ಪ ಉದಾರಿಯಾಗಿದ್ದ. 


ಆ ದಂಪತಿಗಳಿಗಿದ್ದ ಒಬ್ಬನೇ ಮಗ ಮದುವೆಯಾದ ನಂತರ ಬೇರೆ ಮನೆಯಲ್ಲಿ ಸಂಸಾರ ಹೂಡಿದ್ದ. ತನ್ನವರು ಎನ್ನುವವರು ಯಾರೂ ಇಲ್ಲದೇ ಹೋದಾಗ ಗಂಡನೆಂಬುವವನು ಹೆಂಡತಿಯ ಬಳಿ‌ ತುಸು ಮೆತ್ತಗಾಗುತ್ತಾನಂತೆ. ಅದಕ್ಕೆಂದೇ ಅವಳು ಬೇಡಿಕೆ ಇಟ್ಟ ಕೂಡಲೇ ಮೊಬೈಲ್ ಅವಳ ಕೈಗೆ ಬಂದಿತ್ತು. 


ಅವಳೂ ನಿಧಾನವಾಗಿ ಮೊಬೈಲಿನ ವರಸೆ ಕಲಿಯತೊಡಗಿದಳು.


ಹೀಗೇ ಒಂದು ದಿನ ಅಂತರ್ಜಾಲದಲ್ಲಿ ಹುಡುಕುತ್ತಿರುವಾಗ 'ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾನೂನು' ಕಣ್ಣಿಗೆ ಬಿತ್ತು. ಆ ರೀತಿಯೂ ಒಂದು ಕಾನೂನು ಇದೆ ಅಂತಲೇ ಅವಳಿಗೆ ಗೊತ್ತೇ ಇರಲಿಲ್ಲ. 


ಮದುವೆಯಾದಾಗ ಅವಳ ವಯಸ್ಸು ಸಣ್ಣದು. ಬುದ್ಧಿ ಬರುವ ಮೊದಲೇ ಈ ಮನೆಗೆ ಸೊಸೆಯಾಗಿ ಬಂದಿದ್ದಳು. ಹೆಣ್ಣು ಮದುವೆಯಾದ ಮೇಲೆ ಮುಂದೆ ಓದುವ ಅವಕಾಶ ಇರುತ್ತಿರಲಿಲ್ಲ. ಮನೆಗೆ ದಿನಪತ್ರಿಕೆಮ್ಯಾಗಜೀನುಗಳನ್ನು ತರಿಸುತ್ತಿದ್ದರಾದರೂ ಅವುಗಳನ್ನು ಮನೆಯ ಗಂಡಸರು ಮಾತ್ರ ಓದಬೇಕಿತ್ತು. 


ಹಾಗಾಗಿ ಅವಳು ಮದುವೆಯಾದಾಗ ಯಾವ ಶತಮಾನದಲ್ಲಿದ್ದಳೋ ಈಗಲೂ ಅದೇ ಶತಮಾನದಲ್ಲಿಯೇ ಇದ್ದಳು. ಜಗತ್ತಿನ ಆಗುಹೋಗುಗಳು ಒಂದೂ ಗೊತ್ತಿರಲಿಲ್ಲ. 


ಕಣ್ಮುಂದೆ ತುಂಟಾಟ ಮಾಡುತ್ತಾ ಬೆಳೆದ ಮಗಬೆಳೆಯುತ್ತಿದ್ದಂತೆ ಕಡಿಮೆ ಬುದ್ಧಿಯುಳ್ಳವಳು ತನ್ನ ತಾಯಿ ಎಂದು ಹೇಳಿಕೊಳ್ಳಲು ಮುಜುಗರ ಪಡತೊಡಗಿದ. 


ಅದಕ್ಕಾಗಿಯೇ ಮದುವೆಯಾದ ಕೂಡಲೇ ಹೆಂಡತಿಯೊಡನೆ ಬೇರೆ ಮನೆಗೆ ವಾಸ್ತವ್ಯ ಬದಲಾಯಿಸಿದ್ದ. ಅವಳೇನು ಮಗನನ್ನು ಹಚ್ಚಿಕೊಂಡು ಬೆಳೆದವಳಲ್ಲ. ಹಾಗಾಗಿ ನಿರ್ಲಿಪ್ರವಾಗಿದ್ದಳು. 

ಈ ನಿರ್ಲಿಪ್ತತೆಗೂ ಒಂದು ಕಾರಣವಿತ್ತು.


ಮದುವೆಯಾಗಿ ಈ ಮನೆಗೆ ಬಂದಾಗ ವರ್ಷದೊಳಗೆ ತಾಯಿಯಾಗುವ ಸೂಚನೆ ಸಿಕ್ಕಿತು. ಹೆಣ್ಣಾದ ಆಕೆಗೆ ಸಹಜವಾಗಿಯೇ ಹೆಣ್ಣುಮಗುವಿನ ಆಸೆಯಿತ್ತು. 


ಮೊದಲ ಬಾರಿ ಗರ್ಭಿಣಿಯಾದವಳ ಮನಸ್ಸು ಈ ಮಗು ಹೆಣ್ಣಾಗಲಿ ಅಂತ ಹೃದಯ ತುಂಬಿ ಬಯಸಿತ್ತು. ಮಗಳು ಹುಟ್ಟಿದ ಮೇಲೆ ಯಾವ ಬಣ್ಣದ ಸ್ವೆಟರ್-ಟೋಪಿ ಹಾಕಬೇಕು ಅಂತೆಲ್ಲಾ ಮನಸ್ಸಿನಲ್ಲಿ ಕನಸು ಕಂಡಿದ್ದಳು. 


ಮಗುವಿನ ಉದ್ದ ಕೂದಲುಕಲರ್- ಕಲರ್ ರಿಬ್ಬನ್ನುಉದ್ದ ಲಂಗಗೆಜ್ಜೆ ಹೀಗೆ ಕಲ್ಪಿಸಿಕೊಳ್ಳುತ್ತಾ ಪುಳಕಗೊಳ್ಳುತ್ತಿದ್ದಳು. ಅವಳತ್ತೆ ಅವಳನ್ನು ಸ್ಕಾನಿಂಗಿಗೆ ಕರೆದುಕೊಂಡು ಹೋದಾಗ ತನ್ನ ಹೊಟ್ಟೆಯಲ್ಲಿರುವುದು ಹೆಣ್ಣುಮಗುವೇ ಅಂತ ತಿಳಿದಾಗ ಅವಳಷ್ಟು ಸಂತಸದ ವ್ಯಕ್ತಿ ಮತ್ಯಾರೂ ಇರಲು ಸಾಧ್ಯವಿರಲಿಲ್ಲ. ಅವಳ ಕನಸುಗಳಿಗೆಲ್ಲಾ ರೆಕ್ಕೆ ಮೂಡಿ ಹಾರತೊಡಗಿತು.


ಅಷ್ಟರಲ್ಲಿ ಅವಳತ್ತೆಯೂಅವಳ ಗಂಡನೂ ತನ್ನ ಗರ್ಭಪಾತದ ಬಗ್ಗೆ ಮಾತನ್ನಾಡುತ್ತಿರುವುದನ್ನು ಕಂಡು ಬೆಚ್ಚಿದಳು. ಅವರ ಕಡೆ ನೋಡಿದರೆ ಅವರಿಬ್ಬರ ಮುಖದಲ್ಲಿ ಯಾವ ಭಾವನೆಯೂ ಇರಲಿಲ್ಲ. 


ಈ ಮನುಷ್ಯರು ಇಷ್ಟೊಂದು ನಿಷ್ಕರುಣಿಗಳು ಹೇಗಾದರು ಅಂತ ಅರ್ಥವಾಗಲಿಲ್ಲ ಅವಳಿಗೆ. ಮಗು ಯಾವುದಾದರೇನುನಮ್ಮದೇ ತಾನೇಹೆಣ್ಣಾದ ಮಾತ್ರಕ್ಕೆ ಯಾಕೆ ತೆಗೆಸಬೇಕುಎಂಬೆಲ್ಲಾ ಪ್ರಶ್ನೆಗಳನ್ನು ಕೇಳಬೇಕೆಂದುಕೊಂಡಳಷ್ಟೇ. 


ಆದರೆ ಮೊದಲಿನಿಂದಲೂ ಜೋರಾಗಿ ಮಾತನಾಡಿಯೂ ಗೊತ್ತಿಲ್ಲದ ಅವಳಿಗೆ ತನ್ನ ಮಗುವನ್ನು ಹೇಗೆ ಉಳಿಸಿಕೊಳ್ಳಬೇಕೆಂದು ಗೊತ್ತಾಗಲಿಲ್ಲ. 


ಮೌನವಾಗಿ ಕಣ್ಣೀರು ಹಾಕುವುದು ಬಿಟ್ಟರೆ ಬೇರೆ ವಿಧಿ ಇರಲಿಲ್ಲ. ಹೊರುವುದುಹೆರುವುದು ತಾನು.. ಮಗುವಿರುವುದು ತನ್ನ ಹೊಟ್ಟೆಯಲ್ಲಿ.. ಆದರೆ ಆ ಮಗು ಜೀವಂತ ಇರಬೇಕೋ ಬೇಡವೋ ಅಂತ ನಿರ್ಧರಿಸುವುದು ಯಾರೋ ಮೂರನೆಯವರು...

ಕೊನೆಗೂ ಅವರ ನಿರ್ಧಾರವೇ ಅಂತಿಮವಾಯ್ತು.. 

ಮಗು ಹೊರ ಜಗತ್ತನ್ನು ನೋಡುವ ಮೊದಲೇ ಕೊನೆ ಉಸಿರುಬಿಟ್ಟಿತು. ಹೀಗೆಯೇ ತನ್ನ ಮೂವರು ಮುದ್ದು ರಾಜಕುಮಾರಿಯರನ್ನು ಕಳೆದುಕೊಂಡ ನಂತರ ನಾಲ್ಕನೇ ಬಾರಿಯ ಸ್ಕಾನಿಂಗ್ ರಿಸಲ್ಟ್ ಗಂಡು ಮಗು ಎಂದು ತೋರಿಸಿತು. 


ಹೆಣ್ಣು ಮಗುವಿದ್ದಾಗ ಇವರು ಗರ್ಭಪಾತ ಮಾಡಿಸಿದರು. ನನಗೆ ಗಂಡುಮಗು ಬೇಡಗರ್ಭಪಾತ ಮಾಡಿಸಿ ಎಂದಳು. ಈ ಮಾತಿನಿಂದ ಎಲ್ಲರೂ ಕೆರಳಿ ತನಗೆ ಬಾರಿಸಬಹುದೇನೋ ಎಂದುಕೊಂಡಳು. 


ಆದರೆ ಇವಳತ್ತೆಯಾಗಲೀ ಅಥವಾ ಇವಳ ಗಂಡನಾಗಲೀ ಇವಳ ಮಾತಿಗೆ ಪ್ರತಿಕ್ರಿಯೆಯೇ ಕೊಡಲಿಲ್ಲ. ಕಡೆಗೂ ಗಂಡುಮಗು ಆಗುತ್ತದೆಂದು ಸಂತಸದಲ್ಲಿ ಮುಳುಗಿಬಿಟ್ಟರು. ಅವಳ ಯಾವ ಮಾತಿಗೂ ಯಾವ ಬೆಲೆಯೂ ಇರಲಿಲ್ಲ.


ಹೀಗೆ ಇಷ್ಟವಿಲ್ಲದೇ ಹೆತ್ತದ್ದರಿಂದ ಆ ಮಗುವಿನ ಮೇಲೆ ವಿಶೇಷ ಪ್ರೀತಿ ಏನೂ ಇರಲಿಲ್ಲ ಅವಳಿಗೆ. ಅದರಲ್ಲಿಯೂ ಮನೆಯ ಸದಸ್ಯರೆಲ್ಲರ ಮುದ್ದಿನ ಮಗುವಾದ ಅವನಿಗೆ ತಾಯಿಯ ಅನ್ಯಮನಸ್ಕತೆ ಗಂಭೀರವಾಗಿ ಕಾಣಲೇ ಇಲ್ಲ. 


ಅದಕ್ಕೆ ತಲೆಕೆಡಿಸಿಕೊಳ್ಳದೇ ಕರ್ತವ್ಯ ಎನ್ನುವಂತೆ ಅತ್ತೆಮಾವಗಂಡಮಗನ ಸೇವೆ ಮಾಡುತ್ತಾ ಬಂದಿದ್ದಳು. ಆದರೆ ಈಗ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆಗೆ ಕನಿಷ್ಠ ಮೂರು ವರ್ಷಗಳ ಸಜೆ ಮತ್ತು ಹತ್ತು ಸಾವಿರಗಳ ದಂಡ ಅಂತಿರುವುದನ್ನು ನೋಡಿ ಅವಳ ಮನಸ್ಸು ಒಮ್ಮೆ ಮಮ್ಮುಲ ಮರುಗಿತು. 


ಮರುಕ್ಷಣವೇ ಮನಸ್ಸು ಕ್ರೋಧಾಗ್ನಿಯಾಯ್ತು. 


"ಹಾಕ್ರೋ ನಮ್ಮತ್ತೆಯನ್ನು ಜೈಲಿಗೆ" ಅಂತ ಜೋರಾಗಿಯೇ ಹೇಳಿಕೊಂಡಳು. ಅಷ್ಟು ವರ್ಷಗಳಿಂದ ತಡೆ ಹಿಡಿದಿದ್ದ ಆಕ್ರೋಶ ಇಂದು ಆಚೆ ಬಂದಿತ್ತು. 

"ನಾನೂ ಸಹ ಸಂತ್ರಸ್ತೆ... ಮೀ... ಟೂ..." ಎಂದು ಅವಳ ಮನಸ್ಸು ರೋಧಿಸಿತು.. ಜನ್ಮ ನೀಡಿದ್ದರೆ ಇಂದು ಮೂವರು ಹೆಣ್ಣುಮಕ್ಕಳ ಬಾಣಂತನ ಮಾಡುತ್ತಾಮೊಮ್ಮಕ್ಕಳನ್ನು ಆಡಿಸುತ್ತಾ ಇರಬಹುದಿತ್ತು. 


ನನ್ನಿಂದ ನನ್ನ ಸುಖಮಯ ವೃದ್ದಾಪ್ಯವನ್ನು ಕಿತ್ತುಕೊಂಡ ನನ್ನ ಅತ್ತೆಯನ್ನು ಜೈಲಿಗೆ ಹಾಕಿಸಲೇಬೇಕು ಎಂದುಕೊಂಡಳು. ಆದರೆ ಭೂಮಿಯ ಮೇಲೆ ಶಿಕ್ಷೆ ಸಿಗುವ ಮೊದಲೇ ಭಗವಂತ ಅವಳತ್ತೆಯನ್ನು ಕರೆಸಿಕೊಂಡಿದ್ದ. 


ಹಾಗಾಗಿ ಅಪರಾಧ ಮಾಡಿಯೂ ಹೀಗೊಂದು ಕಾನೂನು ಇದೆ ಎಂಬ ಅರಿವಿಲ್ಲದೇ ಇರುವುದರಿಂದ ಅವಳತ್ತೆ ಬಚಾವಾಗಿದ್ದರು. ಇಂತಹಾ ತೆರೆಮರೆಯ ಅಪರಾಧಿಗಳು ಎಷ್ಟಿರುವರೋ

Published in Vishwavani on 12.12.2018

******************************* 

K A Sowmya

Mysore