ಮೇಘನ್ ಮಾರ್ಕೆಲ್ : ಮಹಿಳಾ ಲೇಖನ
ರಾಜಮನೆತನದಲ್ಲೊಬ್ಬ ಸಾಮಾನ್ಯ ಸುಂದರಿ
ಬ್ರಿಟನ್ನಿನ ರಾಜಮನೆತನಕ್ಕೆ ಹೊಸ ಸದಸ್ಯೆಯೊಬ್ಬಳ ಆಗಮನವಾಗಿದೆ. ಸಾಮಾನ್ಯವಾಗಿ ರಾಜಮನೆತನ ಎಂದರೆ ಜನರು ಮೂಗು ಮುರಿಯುವುದೇ ಜಾಸ್ತಿ. ಆದರೆ ಬ್ರಿಟನ್ ರಾಜವಂಶ ಇನ್ನೂ ಜನರ ಕುತೂಹಲವನ್ನು ಉಳಿಸಿಕೊಂಡು ಬಂದಿದೆ. ಇಂದಿಗೂ ಜನರು ಅ ಮನೆತನಕ್ಕೆ ಸಂಬಂಧಿಸಿದ ಆಗುಹೋಗುಗಳನ್ನು ತಮ್ಮದೇ ಎನ್ನುವಂತೆ ಗಮನವಿಟ್ಟು ನೋಡುತ್ತಾರೆ. ಒಳ್ಳೆಯ ವಿಷಯವಿದ್ದರೆ ಸಂತಸ ಪಡುತ್ತಾರೆ. ತಪ್ಪಿದ್ದರೆ ಆಕ್ಷೇಪ ವ್ಯಕ್ತ ಪಡಿಸುತ್ತಾರೆ.
ಅಂತಹಾ ಮನೆತನದ ರಾಜಕುಮಾರನಾದ ಪ್ರಿನ್ಸ್ ಹ್ಯಾರಿಯ ಕೈ ಹಿಡಿದು "ಮೇಘನ್ ಮಾರ್ಕೆಲ್" ಎಂಬ ಕಪ್ಪು ಸುಂದರಿ ಅರಮನೆಗೆ ಕಾಲಿಟ್ಟಿದ್ದಾಳೆ. ಕಾಲಿಡುತ್ತಲೇ ತನ್ನ ವಿಭಿನ್ನವಾದ ವ್ಯಕ್ತಿತ್ವದಿಂದ ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ. ಮದುವೆಗಾಗಿ ಚರ್ಚಿಗೆ ಬರುವಾಗ ಈವರೆಗೂ ನಡೆದುಬಂದ ಸಂಪ್ರದಾಯವನ್ನು ಮುರಿಯುವುದರ ಮೂಲಕ ತಾನೇನು ಎಂದು ತೋರಿಸಿದ್ದಾಳೆ.
ಅರಮನೆಯ ಮಾಜಿ ಸೊಸೆಯಾದ ರಾಜಕುಮಾರಿ ಡಯಾನಾ ಸಹ ಅರಮನೆಯ ಕಾಯ್ದೆ ಕಟ್ಟಳೆಗಳ ಬಗ್ಗೆ ಅಷ್ಟು ಭಯ ಭಕ್ತಿ ಇಟ್ಟುಕೊಂಡಿದ್ದವಳಲ್ಲ.
ಹಾಗಾಗಿ ಡಯಾನಾ ಮಗನಾದ ಪ್ರಿನ್ಸ್ ಹ್ಯಾರಿ ಸಹ ತನ್ನ ತಾಯಿಯಂತೆಯೇ ಯೋಚಿಸುವವ ನಾದ್ದರಿಂದ, ಹೊಸ ಸೊಸೆ ಮೇಘನ್ ಸಹಜವಾಗಿಯೇ ತಾನಂದುಕೊಂಡಿದ್ದನ್ನು ಸಾಧಿಸುವಂತಾಗಿದೆ.
ಪ್ರಖರ ಸ್ತ್ರೀವಾದಿ ಎಂದು ಹೆಸರು ಪಡೆದಿರುವ ಜೀವನದಲ್ಲಿ ಮೊದಲು ತನಗೇನು ಬೇಕು ಎನ್ನುವುದನ್ನು ತನಗೆ ತಾನು ಸ್ಪಷ್ಟಪಡಿಸಿಕೊಂಡು, ನಂತರ ಅದನ್ನು ಪಡೆಯುವತ್ತ ಹೆಜ್ಜೆ ಇಟ್ಟಿದ್ದಾಳೆ.
ಮೊದಲು ನಮ್ಮ ಗುರಿ ಏನೆಂದು ಗೊತ್ತಾದರೆ, ನಂತರ ಆ ಗುರಿ ತಲುಪುವುದು ಸುಲಭ ಅಲ್ಲವೇ?
ಒಂದು ವೇಳೆ ನಾವು ನಮ್ಮ ಗುರಿ ಏನು ಅಂತ ಸ್ಪಷ್ಟಪಡಿಸಿಕೊಳ್ಳುವುದಕ್ಕೇ ಅರ್ಧ ಜೀವನ ಸವೆಸಿದರೆ ಗುರಿ ತಲುಪುವುದು ಹೇಗೆ?
ಈಕೆಗೆ ಚಿಕ್ಕಂದಿನಿಂದಲೂ ರಾಜಮನೆತನದ ಸೊಸೆಯಾಗಬೇಕೆಂಬ ಆಸೆ ಇತ್ತಂತೆ. ಈಗ ತನ್ನಾಸೆಯನ್ನು ಪೂರೈಸಿಕೊಂಡು ಸಂತೃಪ್ತಳಾಗಿದ್ದಾಳೆ.
ಈ ಮೂಲಕ ಇಡೀ ಜಗತ್ತಿನ ಹೆಣ್ಣು ಸಮುದಾಯಕ್ಕೆ ಹಲವು ಸಂದೇಶ ರವಾನಿಸಿದ್ದಾಳೆ.
* ಆಕೆ ಹರೆಯದ ಹುಡುಗಿಯಲ್ಲ, ರಾಜಕುಮಾರನಿಗಿಂತಲೂ ವಯಸ್ಸಿನಲ್ಲಿ ದೊಡ್ಡವಳು.
* ಅಲ್ಲದೆ ಆಕೆಗೆ ಇದು ಮೊದಲ ಮದುವೆಯಲ್ಲ. ಈಗಾಗಲೇ ಮೊದಲೇ ಒಂದು ಮದುವೆಯಾಗಿ, ಆ ಮದುವೆ ಸರಿ ಬರದೇ ಡಿವೋರ್ಸ್ ಪಡೆದಿರುವವಳು.
* ಅವಳು ಯಾವುದೇ ರಾಜಮನೆತನಕ್ಕೆ ಸೇರಿದವಳಲ್ಲ, ಸಾಮಾನ್ಯರಲ್ಲಿ ಸಾಮಾನ್ಯಳು.
*ಆಕೆ ಒಬ್ಬ ಸಿನೆಮಾ ನಟಿ ಮತ್ತು ಹಲವು ಪುರುಷರೊಡನೆ ನಟಿಸಿ ಹಲವು ಚುಂಬನ ದೃಶ್ಯಗಳಲ್ಲಿ ಪಾಲ್ಗೊಂಡಿರುವವಳು.
*ಆಕೆ ಕನ್ಯೆಯೂ ಅಲ್ಲ....
ಒಟ್ಟಾರೆ ಒಬ್ಬ ರಾಜಮನೆತನದ ಸೊಸೆಯಾಗುವ ಯಾವ ಅರ್ಹತೆಯೂ ಇಲ್ಲದವಳು ಆಕೆ. ಆದರೂ ಆಕೆ ರಾಜಕುಮಾರನನ್ನು ಮದುವೆಯಾದಳು. ಇದು ಆಕೆ ಆಸೆ ಪಟ್ಟದ್ದನ್ನು ಪಡೆದುಕೊಂಡ ಆಕೆಯ ಛಲವನ್ನು ತೋರಿಸುತ್ತದೆ.
ಇತ್ತ ಕಡೆ ಬಂದರೆ....
* ಬ್ರಿಟನ್ ರಾಜಕುಮಾರನಿಗೆ ಇದು ಮೊದಲ ಮದುವೆ.
*ಆಕೆಗಿಂತ ವಯಸ್ಸಿನಲ್ಲಿಯೂ ಸಹ ಚಿಕ್ಕವನು.
ಆದರೂ ಯಾವುದೇ ಹಿಂಜರಿಕೆ ಇಲ್ಲದೇ ಈ ಮೊದಲೇ ಮದುವೆಯಾಗಿದ್ದ ಮೇಘನ್ ಮಾರ್ಕೆಲ್ಳನ್ನು ಆತ ಇಷ್ಟಪಟ್ಟ.
* ಆಕೆಯನ್ನು ತನ್ನ ಸಮಾನಾಂತರವಾಗಿ ಭಾವಿಸಿದ ಹೊರತು ಎಲ್ಲರೂ ಭಾವಿಸುವ ಹಾಗೆ ಆಕೆ ಒಬ್ಬ ಸೇವಕಿ ಅಂತ ಆತ ಭಾವಿಸಲಿಲ್ಲ.
* ಆಕೆಯನ್ನು ಕೇವಲ ತನ್ನ ಬಟ್ಟೆ ಒಗೆಯುವ ಅಥವಾ ತಾನು ತಿಂದ ತಟ್ಟೆ ತೊಳೆಯುವ ಒಬ್ಬ ಹೆಂಗಸು ಅಂತಾಗಿ ಅವನು ಭಾವಿಸಲಿಲ್ಲ.
* ತನಗೆ ಸಮಾನವಾದ ಸಂಗಾತಿ ಎಂದು ಸ್ವೀಕರಿಸಿದ.
ಈ ಮೂಲಕ ಮೇಘನ್ ತನಗೆ ಬೇಕಾಗಿದ್ದ ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳುವುದರಲ್ಲಿಯೂ ಜಾಣ್ಮೆ ಮೆರೆದಿರುವುದು ಕಂಡು ಬರುತ್ತದೆ.
ಈ ರೀತಿಯಾಗಿ ಮೇಘನ್ ಎಲ್ಲಾ ಹೆಣ್ಣುಮಕ್ಕಳಿಗೂ ಸ್ಪಷ್ಟವಾದ ಸಂದೇಶ ಕಳಿಸಿದ್ದಾಳೆ. ಏನೆಂದರೆ...
* ಹೆಣ್ಣುಮಕ್ಕಳು ಮೊದಲು ತಮ್ಮ ಬೆಲೆ ತಾವು ಅರಿಯಬೇಕು.
* ತಾವೇನೂ ಅಲ್ಲ ಅಂತ ತಮಗೆ ತಾವೇ ನಿರ್ಧರಿಸಿಕೊಂಡು ಗಂಡಸಿನ ಮುಂದೆ ತಮ್ಮ ಬೆಲೆ ತಾವೇ ಕುಗ್ಗಿಸಿಕೊಳ್ಳಬಾರದು.
* ತಮಗೆ ಸಮಾನವಾಗಿರುವ ಸಂಗಾತಿಯನ್ನು ಹುಡುಕಿ ಮದುವೆಯಾಗಬೇಕು.
* ಅಷ್ಟೇ ಅಲ್ಲ... ಹೊಂದಿಕೊಳ್ಳಲಾಗದ ಸಂಬಂಧದಲ್ಲಿ ಯಾರ ಮುಲಾಜಿಗೋ ಕಟ್ಟುಬಿದ್ದು ಜೀವನ ಸಾಗಿಸುವ ಅಗತ್ಯ ಇಲ್ಲ.
* ಯಾವಾಗ ನಮಗೆ ಸಾಕೆನಿಸುತ್ತದೆಯೋ ಆಗ ಆ ಸಂಬಂಧದಿಂದ ಆಚೆ ಬಂದು ಬಿಡುವುದು ಬಹಳ ಒಳ್ಳೆಯದು.
* ಮುಂದೆ ಬೇರೆ ಮದುವೆ ಆಗಲೂಬಹುದು. ಆದರೆ ಮದುವೆ ಮುರಿಯಿತೆಂದು ನಿಮ್ಮನ್ನು ನೀವೇ ಕೀಳಾಗಿ ಕಾಣಬೇಡಿ.
* ಮೊದಲು ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿತುಕೊಳ್ಳಿ.
* ನಾವಲ್ಲದೇ ನಮ್ಮನ್ನು ಮತ್ಯಾರೂ ಪ್ರೀತಿಸಲಾರರು.
* ನಿಮಗೆ ನೀವು ಬೆಲೆ ಕೊಟ್ಟುಕೊಂಡರೆ ಉಳಿದವರೂ ಬೆಲೆ ಕೊಡುತ್ತಾರೆ. ಕೊಡಲೇಬೇಕು.
ಒಟ್ಟಿನಲ್ಲಿ ಇಡೀ ಜಗತ್ತಿನ ಗಮನಸೆಳೆದ ಈ ಮದುವೆ ತನ್ನ ವೈವಿಧ್ಯಮಯ ಕಾರಣಗಳಿಂದಾಗಿ ಜಗತ್ತಿನ ಎಲ್ಲಾ ಸ್ಥರದ ಜನರನ್ನೂ ಆಕರ್ಷಿಸಿದೆ. ಆಕೆಯ ಕ್ರಾಂತಿಕಾರಿ ಹೆಜ್ಜೆಯನ್ನು ಜನರು ಹೊಗಳಿದರೇ ಹೊರತು ಎಲ್ಲಿಯೂ ಅಪಸ್ವರ ಕೇಳಿ ಬರಲಿಲ್ಲ.
ಇದನ್ನು ಹೆಣ್ಣಿನ ಸ್ವಾತಂತ್ರದ ಮೊದಲ ಹೆಜ್ಜೆ ಎನ್ನಬಹುದೇ?
**************


