ಅವಳು ನಂಬರ್ ಚೇಂಜ್ ಮಾಡ್ತಾಳೆ
ಪ್ರೀತಿಯಲ್ಲಿ ಬೀಳಲು ಹುಡುಗ-ಹುಡುಗಿ ಇಬ್ಬರೂ ಏಳು ಕೆರೆ ನೀರು ಕುಡಿಯಬೇಕು. ಇಬ್ಬರಲ್ಲಿಯೂ ಬ್ರಹ್ಮಾಂಡದಷ್ಟು ತಾಳ್ಮೆ ಇರಬೇಕು. ತಮ್ಮ ತಮ್ಮ ಜೀವನದ ಅಭ್ಯಾಸಗಳನ್ನೇ ತಮ್ಮನ್ನು ಪ್ರೀತಿಸುವವರಿಗಾಗಿ ಬದಲಾಯಿಸಿಕೊಳ್ಳಬೇಕು.
ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತು, ನಂತರ ಒಟ್ಟಿಗೆ ಬಾಳುವ ಕನಸು ಕಾಣಬೇಕು. ಇಷ್ಟೆಲ್ಲಾ ಆದ ಮೇಲೆಯೂ ಸಹ ಇಬ್ಬರೂ ದೂರವಾಗಲು ಕೇವಲ ಒಂದೇ ಒಂದು ದುರ್ಬಲ ಕ್ಷಣ ಸಾಕು.
ಪ್ರೀತಿ ಎಂದರೆ ಹಾಗೆಯೇ...
ಅದಕ್ಕೇ "ಪ್ರೀತಿ" ಎನ್ನುವ ಪದವಿನ್ನೂ ಜಗತ್ತಿನ ವಿಸ್ಮಯವಾಗಿ ಇಂದಿಗೂ ಉಳಿದಿರುವುದು. ಪ್ರೀತಿ ಹೇಗೆ ಹುಟ್ಟುತ್ತದೆ, ಹೇಗೆ ದೂರವಾಗುತ್ತದೆ ಅಂತ ಯಾರಿಗೂ ತಿಳಿದಿಲ್ಲ. ಎಷ್ಟು ಬೇಗ ಹುಟ್ಟುತ್ತದೆಯೋ ಅಷ್ಟೇ ಬೇಗ ನಮ್ಮಿಂದ ದೂರವಾಗಿ ನಮಗೆ ಶಾಶ್ವತವಾದ ನೋವನ್ನು ಉಡುಗೊರೆಯಾಗಿ ನೀಡುತ್ತದೆ. ಪ್ರೀತಿಯಲ್ಲಿ ಎಲ್ಲವೂ ಸಾಧ್ಯ.
ಪ್ರೇಮಿಗಳ ಪುನರ್ಮಿಲನ ಸಾಧ್ಯವಿಲ್ಲವೇ?
ಯಾಕಿಲ್ಲ.... ಆದರೆ ನಾವು ನಮ್ಮ ಮನದೊಳಗೆ ಸಾಕಿಕೊಂಡಿರುವ ಅಹಂ ನಮ್ಮನ್ನು ಒಂದಾಗಲು ಬಿಡುವುದಿಲ್ಲ. ದೂರವಾದ ಪ್ರೇಮಿಗಳು ಅವಳೇ ಕರೆಯುತ್ತಾಳೆ ಅಂತ ಅವನೂ, ಅವನೇ ಕರೆಯುತ್ತಾನೆ ಅಂತ ಅವಳೂ ಜೀವಮಾನವಿಡೀ ಕಾಯುತ್ತಲೇ ಇದ್ದು ಬಿಡುತ್ತಾರೆ.
ತಾವು ದೂರವಾದ ಘಳಿಗೆಯಲ್ಲಿ ಸ್ವಲ್ಪ ತಾಳ್ಮೆ ವಹಿಸಿದ್ದರೆ ಇಂದು ಆತ ಅಥವಾ ಆಕೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ಅವರು ಯೋಚಿಸುವುದಿಲ್ಲ. ಒಂದೇ ಕ್ಷಣಕ್ಕೆ ಅವರು ತಮಗೆ ಸರಿ ಬರುವುದಿಲ್ಲ ಅಂತ ನಿರ್ಧಾರ ತೆಗೆದುಕೊಂಡು ಅವರ ಬದುಕಿನಿಂದಾಚೆ ಹೊರಟು ಬಿಡುತ್ತಾರೆ.
ಇಲ್ಲಿ ಹುಡುಗನಾದವನು ಆ ಕ್ಷಣದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಆದರೆ ನಂತರ ಜೀವನಪೂರ್ತಿ ಪಶ್ಚಾತ್ತಾಪದಿಂದ ನರಳುತ್ತಾನೆ.
ಹುಡುಗಿಯಾದವಳು ಆ ಒಂದು ಕ್ಷಣದಲ್ಲಿ ಏನೂ ನಿರ್ಧರಿಸೋಲ್ಲ. ಈ ಸಂಬಂಧ ಉಳಿಸಿಕೊಳ್ಳಲು ಕಡೆಯವರೆಗೂ ತನ್ನ ಕೈಲಾದ ಹೋರಾಟ ಮಾಡುತ್ತಾಳೆ. ಯಾವಾಗ ಪರಿಸ್ಥಿತಿ ತನ್ನ ಕೈ ಮೀರಿ ಹೋಗುತ್ತಿದೆ ಎನಿಸುತ್ತದೆಯೋ ಆಗ ಆ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ಬಿಡುತ್ತಾಳೆ ಮತ್ತು ಇನ್ನೊಮ್ಮೆ ಆ ಬಗ್ಗೆ ಯೋಚಿಸಲು ಸಹ ಹೋಗುವುದಿಲ್ಲ.
ಇದೇ ಹುಡುಗಿಗೂ ಮತ್ತು ಹುಡುಗರಿಗೂ ಇರುವ ವ್ಯತ್ಯಾಸ. ಹುಡುಗಿ ಎಂದಿಗೂ ಅತ್ಯಂತ ಗಟ್ಟಿ ನಿರ್ಧಾರ ಮಾಡಬಲ್ಲಳು. ಒಮ್ಮೆ ಒಂದು ನಿರ್ಧಾರ ತೆಗೆದುಕೊಂಡರೆ ಮತ್ತೆಂದೂ ಆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ತನ್ನ ಪ್ರೀತಿ ಅಥವಾ ತನ್ನ ಮನೆಯವರು ಈ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳುವಾಗ ಆಕೆ ಬಹಳವಾಗಿ ಯೋಚಿಸುತ್ತಾಳೆ.
ಈ ಹುಡುಗ ತನ್ನನ್ನು ಬಾಳಿಸಬಲ್ಲ ಅಂತ ನಂಬಿಕೆ ಮೂಡಿದರೆ ಅವನೊಡನೆ ಮದುವೆಯಾಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅಕಸ್ಮಾತ್ ಅವಳಿಗೆ ತನ್ನ ಪ್ರಿಯಕರನಲ್ಲಿ ವಿಶ್ವಾಸ ಮೂಡದಿದ್ದರೆ ಆಕೆ ತನ್ನ ಮನೆಯವರನ್ನು ಆರಿಸಿಕೊಳ್ಳುತ್ತಾಳೆ ಮತ್ತು ಅವರು ತೋರಿಸಿದ ಹುಡುಗನಿಂದ ತಾಳಿ ಕಟ್ಟಿಸಿಕೊಳ್ಳಲು ತನ್ನನ್ನು ತಾನು ಮಾನಸಿಕವಾಗಿ ಸಿದ್ಧಪಡಿಸಿ ಕೊಳ್ಳುತ್ತಾಳೆ.
ಆಗ ಅವಳು ಮಾಡುವ ಮೊಟ್ಟಮೊದಲ ಕೆಲಸವೆಂದರೆ ಫೋನ್ ನಂಬರ್ ಬದಲಿಸುವುದು. ಹಳೆಯ ಪ್ರೇಮಿ ಫೋನ್ ಮಾಡಿಬಿಟ್ಟಾನು ಎನ್ನುವುದೇ ಬಹುತೇಕ ಹೆಣ್ಣುಮಕ್ಕಳ ಫೋನ್ ನಂಬರ್ ಬದಲಾಗಲು ಕಾರಣ. ಪ್ರೀತಿಯಲ್ಲಿ ಅವಳೇನು ಮೋಸಗಾತಿಯಲ್ಲ. ಇಬ್ಬರಿಗೂ ಹೊಂದಾಣಿಕೆಯಾಗದ ಕಾರಣ ಅವನ ಪ್ರೀತಿಯನ್ನು ಧಿಕ್ಕರಿಸಿ ಬಂದಿರುತ್ತಾಳೆ.
ಆದರೆ ಅವಳ ಹೃದಯದಲ್ಲಿರುವ ಪ್ರೀತಿ ಹಾಗೆಯೇ ಉಳಿದಿರುತ್ತದೆಯಲ್ಲ...
ಎಷ್ಟೇ ಆಗಲಿ ಹೆಣ್ಣು ಮನಸ್ಸು, ಅವನು ಫೋನ್ ಮಾಡಿದಾಗ ಈ ಹಾಳಾದ ಹೃದಯ ಅವನೆಡೆ ವಾಲಬಹುದು, ಮನಸು ಅವನಿಗೆ ಸೋಲಬಹುದು ಅನ್ನುವ ಭಯ ಕಾಡುತ್ತದೆ ಆಕೆಗೆ.
ಜೊತೆಗೆ ಈಗ ತನ್ನ ಜೊತೆಗಿರುವ ಸಂಗಾತಿಗೆ ತನ್ನಿಂದ ಮೋಸವಾಗುವುದನ್ನು ಯಾವ ಕಾರಣಕ್ಕೂ ಆಕೆ ಸಹಿಸಲಾರಳು. ಅದಕ್ಕೇ ಮದುವೆ ಫಿಕ್ಸ್ ಆಗುವ ಹೆಣ್ಣುಮಕ್ಕಳು ಸಿಮ್ ಚೇಂಜ್ ಮಾಡುತ್ತಾರೆ. ಯಾರು ತಾನೇ ತಾವೇ ತಾವಾಗಿ ಇನ್ನೊಬ್ಬರ ಮುಂದೆ ತಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಹಾಗೆ ನಡೆದುಕೊಳ್ಳುತ್ತಾರೆ?
ತನ್ನ ಗಂಡನಿಗೆ ಇವಳು ಯಾವತ್ತೋ ಅದ್ಯಾರನ್ನೋ ಪ್ರೀತಿಸಿದ್ದಳು ಎನ್ನುವ ವಿಷಯ ಗೊತ್ತಾದರೆ ಏನು ಅನ್ನಿಸಬಹುದು?
ತಕ್ಷಣಕ್ಕೆ ಆತ ಏನೂ ಮಾಡದಿರಬಹುದು. ಆದರೆ ಪ್ರತೀ ದಿನ ಪ್ರತೀ ಕ್ಷಣ ಅವಳನ್ನು ಅದೇ ಮಾತು ಹೇಳಿ ಹೇಳಿ ಆಕೆಯನ್ನು ಹಂಗಿಸಬಹುದಲ್ಲವೇ?
ಜೀವನಪೂರ್ತಿ ಅವನು ಅವಳನ್ನು
ಅನುಮಾನದಿಂದಲೇ ನೋಡಬಹುದಲ್ಲವೇ?
ಇಂತಹಾ ಪರಿಸ್ಥಿತಿಯಲ್ಲಿ ಆಕೆ ತನ್ನ ಗಂಡನಿಗೆ ಎಷ್ಟು ನಿಯತ್ತಿನಿಂದ ನಡೆದುಕೊಂಡರೂ ಗಂಡನಾದವನಿಗೆ ಒಂದು ಸಂಶಯ ಮನದ ಮೂಲೆಯಲ್ಲೆಲ್ಲೋ ಇದ್ದೇ ಇರುತ್ತದೆ.
ಈ ಸಂಶಯ ಅವನಿಗೆ ಅವಳನ್ನು ತನ್ನ ಮನಸ್ಸಿಗೆ ಹತ್ತಿರವಾಗದಂತೆ ತಡೆಯುತ್ತದೆ. ಇದರಿಂದ ಅವಳ ಬದುಕೇ ಹಾಳಾಗುತ್ತದೆ. ಆದ್ದರಿಂದಲೇ ಇದೆಲ್ಲಾ ತಂಟೆಯೇ
ಬೇಡವೆಂದು ಹೆಣ್ಣುಮಕ್ಕಳು ನಂಬರ್
ಬದಲಿಸಿ ನಿಟ್ಟುಸಿರು ಬಿಡುತ್ತಾರೆ.
ಏಕೆಂದರೆ ಪ್ರೀತಿಗೆ ಹೊರತಾಗಿಯೂ ಆಕೆಯ ಜೀವನವಿದೆ ಅಲ್ಲವೇ?
ಮದುವೆಯಂತಹ ವಿಷಯದಲ್ಲಿ ಸಾಮಾನ್ಯವಾಗಿ ಹುಡುಗನಾಗಲೀ ಅಥವಾ ಹುಡುಗಿಯಾಗಲೀ ತಾವು ಬಹಳ ಒಳ್ಳೆಯವರು ಅಂತ ಬಿಂಬಿಸಿಕೊಳ್ಳುತ್ತಾರೆ. ಒಂದು ಪಕ್ಷ ಹುಡುಗರಾದರೂ ತಾವು ಪ್ರೀತಿಸಿದ್ದ ಹುಡುಗಿಯರ ಬಗ್ಗೆ ಹೇಳುತ್ತಾರೆ ಹೊರತೂ ಹುಡುಗಿಯರು ಇಂದಿಗೂ ಸಹ ತಮ್ಮ ಹಳೆಯ ಪ್ರೀತಿಯ ಬಗ್ಗೆ
ಸೊಲ್ಲೆತ್ತುವುದಿಲ್ಲ.
ಇಂತಹಾ ಪರಿಸ್ಥಿತಿಯಲ್ಲಿ ಗಂಡನಾಗುವವನಿಗೆ ತನ್ನ ಹಳೆಯ ಜೀವನದ ವಿಷಯಗಳು ತಿಳಿಯಲಿ ಅಂತ ಯಾರೂ ಬಯಸುವುದಿಲ್ಲ.
ಏಕೆಂದರೆ ಮದುವೆ ಎಂದರೆ ಸಹಜೀವನ.
ಒಂದು ಚಿಕ್ಕ ಅನುಮಾನ ಬಂದರೂ ಜೀವನವೇ ನರಕವಾಗುತ್ತದೆ. ಹಳೆಯ
ಪ್ರೇಮಿ ಮತ್ತೆ ಫೋನ್ ಮಾಡುವುದು, ತಾನು ಮತ್ತೆ ಅವನಿಗೆ ಮನಸೋಲುವುದು, ಇದು ಗಂಡನಿಗೆ ಗೊತ್ತಾಗುವುದು...
ಇವೆಲ್ಲಾ ಬೇಡವೆಂದು ಆಕೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಹುಡುಗರು ಅವಳನ್ನು ಹೇಡಿ ಎಂದರೂ ಸರಿಯೇ... ಯಾವ ತಪ್ಪೂ ಮಾಡದ ತನ್ನ ಗಂಡನಿಗಾಗಿ ಅವಳು ತೆಗೆದುಕೊಳ್ಳುವ ಈ ನಿರ್ಧಾರ ನೂರಕ್ಕೆ ನೂರರಷ್ಟು ಸರಿಯಿದೆ.
*************
ಕೆ.ಎ.ಸೌಮ್ಯ
ಮೈಸೂರು
(Published in Vishwavani on 10.10.2018)


