ಮದುವೆಯ ನಂತರದ ಬದುಕು



ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಡುತ್ತವೆ. ಆದರೆ ದಂಪತಿಗಳು ಬಾಳ್ವೆ ಮಾಡಬೇಕಾಗಿರುವುದು ಮಾತ್ರ ಭೂಮಿಯ ಮೇಲೆ. 


ಸ್ವರ್ಗದ ನಿಯಮಗಳು ಏನಿವೆಯೋ ನನಗೆ ಗೊತ್ತಿಲ್ಲ. ಆದರೆ ಭೂಮಿಯ ಮೇಲೆ ಗಂಡು-ಹೆಣ್ಣು ಇಬ್ಬರಿಗೂ ತಮ್ಮ ತಮ್ಮ ಸ್ವಂತ ಅಭಿಪ್ರಾಯ ಎಂಬುದು ಇದೆ, ಇಬ್ಬರಿಗೂ ಪ್ರತ್ಯೇಕವಾದ ಮನಸ್ಸುಗಳಿವೆ, ಬೇರೆ ಬೇರೆಯಾದ ಯೋಚನಾ ಲಹರಿಗಳಿವೆ, ಅಹಮ್ ಇದೆ, ಹಠವಿದೆ,  ಸ್ವಾಭಿಮಾನವಿದೆ.. 


ಇಷ್ಟೆಲ್ಲ ವೈರುಧ್ಯಗಳಿದ್ದೂ ಇಂತಿಪ್ಪ ದಂಪತಿಗಳು‌ ಒಂದೇ ಸೂರಿನಡಿಯಲ್ಲಿ ವಾಸ ಮಾಡಬೇಕಿದೆ.


ಒಂದು ದಿನ ದಿಢೀರ್ ಅಂತ ಆಕೆ ನಿಮ್ಮ ಮನೆಗೆ ಕಾಲಿಡುತ್ತಾಳೆ. ಜೊತೆಯಲ್ಲಿಯೇ ನಿಮ್ಮ ಜೀವನದೊಳಗೂ... ಒಂದು ಜೀವ ನಮಗಾಗಿ ಮಿಡಿಯುತ್ತದೆ, ನಮಗಾಗಿ ಕಾಯುತ್ತದೆ, ನಮಗಾಗಿ ಮರುಗುತ್ತದೆ ಎಂದರೆ ಯಾರು ತಾನೇ ಬೇಡ ಎನ್ನುತ್ತಾರೆ? 


ಆದರೆ ಇಬ್ಬರಿಗೂ ಒಬ್ಬರಿಗೊಬ್ಬರು ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕೇ ಬೇಕು. ಅದಕ್ಕಿಂತಲೂ ಮೊದಲು ಅವರ ವೈಯುಕ್ತಿಕ ಹಿನ್ನೆಲೆ ಬಗ್ಗೆ ತಿಳಿಯಬೇಕು. ಜಾತಕದಲ್ಲಿ ಅವರ ಗುಣ, ಸ್ವಭಾವವನ್ನು ತಿಳಿದುಕೊಂಡಿದ್ದರೂ ಸಹ ಪ್ರತಿಯೊಬ್ಬರೂ ಆಸೆ ಪಡುವುದು ತಾವು ಹೇಳಿದ ಹಾಗೆ ಕೇಳುವ ಸಂಗಾತಿಗಳನ್ನು. 


ಉದಾಹರಣೆಗೆ ಸಿಂಹರಾಶಿಯವರು ಸ್ವತಂತ್ರ ಆಲೋಚನೆ ಹೊಂದಿರುತ್ತಾರೆ ಎಂದು ಗೊತ್ತಿದ್ದರೂ ಸಹ, ಆ ರಾಶಿ ಹೊಂದಿರುವ ನಮ್ಮ ಸಂಗಾತಿ ನಮ್ಮ ಮಾತು ಕೇಳಲಿ ಎಂದು ಬಯಸುತ್ತೇವೆ. ನಮ್ಮ ಮಾತು ಕೇಳಿದರೆ ಮಾತ್ರ ಒಳ್ಳೆಯವರು,  ಕೇಳದಿದ್ದರೆ ಕೆಟ್ಟವರು ಅಂತ ನಿರ್ಧಾರ ಮಾಡಿ ಬಿಡುತ್ತೇವೆ. ‌       


ಸಾಮಾನ್ಯವಾಗಿ ಹುಡುಗಿಯರು ಮದುವೆಗೂ ಮುಂಚೆ  ಬಹಳ ಸ್ವತಂತ್ರ ಆಲೋಚನೆ ಹೊಂದಿರುತ್ತಾರೆ. ಯಾವ ಕಲರ್ ನೈಲ್ ಪಾಲಿಶ್ ಹಾಕಲಿ ಎನ್ನುವುದರಿಂದ ಹಿಡಿದು ಇಂದು  ಏನು ತಿನ್ನಬೇಕು ಎನ್ನುವುದನ್ನೂ ಅವರು ತಾವೇ ನಿರ್ಧಾರ ಮಾಡುತ್ತಾರೆ. ಹೀಗಿರುವಾಗ ಮದುವೆಯ ನಂತರ ಅಮ್ಮನ ಮನೆಗೆ ಫೋನ್ ಮಾಡಲೂ ಸಹ ಪರ್ಮಿಷನ್  ಕೇಳಬೇಕು ಎಂದರೆ ಉಸಿರು ಕಟ್ಟಿದ ಹಾಗೆ   ಅಂತ ಅನ್ನಿಸಲಿಕ್ಕೆ ಶುರುವಾಗುತ್ತದೆ. 


ಹುಟ್ಟಿದಾಗಿನಿಂದ ಬೆಳೆದಿರುವ ಮನೆ ಅದು. 


ಕಲ್ಲು ಸಿಮೆಂಟಿನ  ಮನೆಯಲ್ಲ...  ಜೀವಗಳ  ಬಂಧವದು. ಅಷ್ಟು ಸುಲಭವಾಗಿ  ಮರೆಯಲಾಗೋಲ್ಲ.  ಹಾಗಂತ ಮರೆಯುವುದೇ ಇಲ್ಲ ಅಂತಲ್ಲ. ಮರೆಯಲು ಸಮಯ ಹಿಡಿಯುತ್ತದೆ. ಹುಡುಗರು ಅಪ್ಪ ಅಮ್ಮನ ಜೊತೆಗೇ ಇರುತ್ತಾರೆ.  ಆದ್ದರಿಂದ ಅವರಿಗೆ ಈ ಭಾವ ಅರ್ಥವಾಗೋಲ್ಲ. 


ಇದು ಅರ್ಥವಾಗಬೇಕೆಂದರೆ ದೂರದೂರಿನಲ್ಲಿ ಕೆಲಸದಲ್ಲಿರುವ ಹುಡುಗನನ್ನು ಒಮ್ಮೆ ಮಾತನಾಡಿಸಿನೋಡಿ. ತನ್ನ  ತಂದೆ,  ತಾಯಿ,  ಮನೆಯನ್ನು  ಹುಡುಗರೂ ಸಹ ಎಷ್ಟು  ನೆನೆಸಿಕೊಳ್ಳುತ್ತಿರುತ್ತಾರೆ ಅಂತ ಗೊತ್ತಾಗುತ್ತದೆ. ಇದು ಲಿಂಗಾಧಾರಿತವಾಗಿ ಕಾಡುವ ಸಮಸ್ಯೆಯಲ್ಲ. 


ಗಂಡು-ಹೆಣ್ಣು ಇಬ್ಬರಿಗೂ ಕಾಡುವ ನೆನಪುಗಳಿವು.  


ಹೆಣ್ಣಾಗಲಿ ಗಂಡಾಗಲೀ.. ಒಬ್ಬರಿಗೊಬ್ಬರು ಹೊಂದಿಕೊಳ್ಳಲು ಸಮಯ ಬೇಕು. ಅದಕ್ಕಾಗಿ ಅವರನ್ನು ಅವರ ಪಾಡಿಗೆ ಬಿಡಬೇಕು. ಪರಸ್ಪರ  ಅವಲಂಬನೆ ಹುಟ್ಟಿದಾಗಲೇ ಒಬ್ಬರು ಸನಿಹದಲ್ಲಿ  ಇಲ್ಲದಿದ್ದಾಗ ಮತ್ತೊಬ್ಬರು ಅವರಿಗಾಗಿ  ಕನವರಿಸುವುದು. ಒಟ್ಟಿಗೆ ಹುಟ್ಟಿರದ,  ಒಟ್ಟಿಗೆ  ಬೆಳೆದಿರದ, ಮದುವೆಗೂ ಮುಂಚೆ ಪರಿಚಯವೂ  ಸಹ ಇರದ ಗಂಡು ಹೆಣ್ಣು ಮದುವೆಯಾದ ಕೂಡಲೇ  ಆತ್ಮೀಯರಂತೆ ವರ್ತಿಸುವುದು  ಸಿನೆಮಾ, ಟಿವಿಗಳಲ್ಲಿ ಮಾತ್ರ. 


ನಿಜ ಜೀವನದಲ್ಲಿ  ಮದುವೆಯಾಗಿ  ವರ್ಷಗಳು  ಉರುಳಿದರೂ ಪತಿಗೆ ಪತ್ನಿ ಮತ್ತು ಪತ್ನಿಗೆ ಪತಿ ಅಪರಿಚಿತರ ರೀತಿಯೇ ಇರುತ್ತಾರೆ.  ಮಕ್ಕಳು ಎದೆಯ ಮಟ್ಟ ಬೆಳೆದು ನಿಂತಿದ್ದರೂ ಸಹಾ ಗಂಡನಿಗೆ ತನ್ನ ಹೆಂಡತಿಗೆ ಇಷ್ಟವಾದ ಬಣ್ಣ ಯಾವುದು ಅಂತ ಗೊತ್ತಿರುವುದಿಲ್ಲ. ಬಣ್ಣ  ಗೊತ್ತಿದ್ದರೆ ಆಕೆಯ  ಹುಟ್ಟುಹಬ್ಬದಂದೋ  ಅಥವಾ ಮದುವೆಯ ದಿನದಂದೋ ಆ ಬಣ್ಣದ  ಸೀರೆ ತಂದು ಅವಳಿಗೆ ಸರ್ ಪ್ರೈಸ್ ಗಿಫ್ಟ್ ಕೊಡಬಹುದು. ಆ ಮೂಲಕ ತಮ್ಮ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬಹುದು.  


ಅಲ್ಲವೇ?


ಮದುವೆಯಾವುದು, ಮಕ್ಕಳು ಮಾಡಿಕೊಳ್ಳುವುದುನಂತರ ಮಕ್ಕಳನ್ನು ಸಾಕಲು ಹೆಣಗಾಡುವುದು ಇಷ್ಟೇ ಜೀವನ ಎಂದುಕೊಂಡು ಬಿಟ್ಟಿದ್ದಾರೆ ಜನರು. ಮಕ್ಕಳಾಗದಿದ್ದರೆ ಆಕಾಶ ಕಳಚಿಬಿದ್ದಂತೆ ಒದ್ದಾಡುತ್ತಾರೆ. ಆದರೆ ಇದೇ ಸಮಯದಲ್ಲಿ  ಹೆಂಡತಿಯ ಮನಸ್ಸಿನಲ್ಲೇನಿದೆ ಅಂತ ತಿಳಿಯಲು  ಹೋಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸ ಮುಗಿದು, ಅವರು  ಮದುವೆಯಾಗಿ ಹೋದ ನಂತರ ಹೆಂಡತಿಯ ನಿಜವಾದ ಬೆಲೆ ಅವರಿಗೆ  ಗೊತ್ತಾಗಲು ಶುರುವಾಗುತ್ತದೆ.  


ಅದಕ್ಕೆಂದೇ ಮದುವೆಯಾದಾಗ ಕಚ್ಚಾಡುತ್ತಿದ್ದ ದಂಪತಿಗಳು ತಮ್ಮ ಕೊನೆಗಾಲದಲ್ಲಿ ಬಹಳ ಅನ್ಯೋನ್ಯವಾಗಿರುತ್ತಾರೆ. ಏಕೆಂದರೆ ಈ ವಯಸ್ಸಿನಲ್ಲಿ ಅವರಿಗೆ ತಮ್ಮ ಹೆಂಡತಿಯ ಜೊತೆ ಮುಕ್ತವಾಗಿ ಮಾತನಾಡಲು ಯಾರ ತಕರಾರೂ ಇರುವುದಿಲ್ಲ.


ಹೆಣ್ಣುಮಕ್ಕಳಿಗೆ ಬುದ್ಧಿ ಬಂದಾಗಿನಿಂದ ಗಂಡನ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಅಂತ ಟ್ರೈನಿಂಗ್ ಕೊಡುವುದರಿಂದ ಬಹಳಷ್ಟು ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ಏನು ತೊಂದರೆ ಎದುರಾದರೂ ದೂಸರಾ ಮಾತನಾಡದೇ ಸಹಿಸಿಕೊಂಡು ಸಂಸಾರ ಸಾಗಿಸುತ್ತಾರೆ. 


ಆದರೆ ಈಗಿನ ಹೆಣ್ಣುಮಕ್ಕಳು ತಮ್ಮ ಕಾಲಿನ ಮೇಲೆನಿಂತುಕೊಳ್ಳುವಷ್ಟು ಶಕ್ತರು. ತಮಗೆ ಮರ್ಯಾದೆ ಇಲ್ಲದ ಕಡೆ ಅವರು ಇರಲಾರರು. ಗಂಡನ ಮನೆಯಲ್ಲಿ ಸೂಕ್ತ ಗೌರವ ಸಿಗದಿದ್ದರೆ ಸಂಬಂಧವನ್ನೇ ಧಿಕ್ಕರಿಸಿ ಹೊರಗೆ ಬರುತ್ತಾರೆ. 


ಮೊದಲೇ ಹೇಳಿದ ಹಾಗೆ ಯಾವ ಸಂಬಂಧವೂ ಇಲ್ಲದ  ಗಂಡನ ಜೊತೆ ಬಾಳಲು ಬಹಳಷ್ಟು ಆತ್ಮೀಯತೆ ಬೇಕು. ಗಂಡನಿಂದಲೇ ಅದು ಸಿಗದಿದ್ದಾಗ ಯಾವ ಕಾರಣಕ್ಕಾಗಿ ಆ ಮನೆಯಲ್ಲಿರುತ್ತಾರೆ ಅವರು? 


ಒಟ್ಟಿಗೆ ಬಾಳಿದಾಗ ಮಾತ್ರವೇ ಬೇರ್ಪಡಲು  ಕಷ್ಟವಾಗುತ್ತದೆ. ಆದರೆ ಒಟ್ಟಿಗಿರಲು ಬಿಡದಿದ್ದಾಗ  ಅವರಿಗೆ ಬಂಧ ಮುರಿಯಲು ಕಷ್ಟವಾಗೋಲ್ಲ. 


ಆ ಜೀವವೂ ನಮ್ಮಂತೆಯೇ ಅಂತ ಯೋಚಿಸಿದಾಗ ಮಾತ್ರ ಇದಕ್ಕೆ ಪರಿಹಾರ ಸಿಗುತ್ತದೆ. ಅವರ ಸ್ಥಾನದಲ್ಲಿ ಅವರಿಗೆ ಉಳಿಯಲು ಬಿಡಬೇಕು. ಅಂದರೆ ಆಕೆಗೆ ತನ್ನ ಪಾತ್ರ ವಹಿಸಲು ಮನೆಯ ಹಿರಿಯರು ಬಿಡಬೇಕು. 


ಆಕೆ ಅವರಿಗೆ ಸೊಸೆಯಷ್ಟೇ ಅಲ್ಲ, ತನ್ನ ಗಂಡನಿಗೆ  ಹೆಂಡತಿ ಕೂಡಾ. ಅವಳ ಪಾತ್ರಗಳನ್ನು ನಿರ್ವಹಿಸಲು ಮುಕ್ತವಾಗಿ ಬಿಟ್ಟಾಗ ಆಕೆಯೂ ಎಲ್ಲರೊಂದಿಗೆ ಹೊಂದಿಕೊಂಡು ಒಂದಾಗಿ ಬಾಳಬಲ್ಲಳು. 


ಇಲ್ಲದಿದ್ದರೆ ಮದುವೆಯ ನಂತರದ ಬದುಕಿನಲ್ಲಿ ಬಿರುಕು ಮೂಡುವುದು ಖಂಡಿತಾ.


***************


ಕೆ.ಎ.ಸೌಮ್ಯ

ಮೈಸೂರು


(Published in Vishwavani on 14.11.2018)